ಮಂಗಳೂರು: ಮಣ್ಣಗುಡ್ಡ ಮಂಗಳ ಆಂಗ್ಲ ಮಾಧ್ಯಮ ಶಾಲೆ - ಹೆತ್ತವರ ಸಮಾವೇಶ

ಶಾಲೆಯ ಹಳೆ ವಿದ್ಯಾರ್ಥಿನಿ ಕುಮಾರಿ ಅನುಷಾ ಎಸ್. ದೇವಾಡಿಗ ತನ್ನ ಸಿಎ ಪರೀಕ್ಷೆಯನ್ನು ಪ್ರಥಮ ಪ್ರಯತ್ನದಲ್ಲಿಯೇ ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಯಾಗಿರುವುದಕ್ಕೆ ಶಿಕ್ಷಕ-ರಕ್ಷಕ ಸಂಘದ ವತಿಯಿಂದ ಸನ್ಮಾನಿಸಲಾಯಿತು ... 
ಮಂಗಳೂರು: ಹೆತ್ತವರು ಸದಾ ತಮ್ಮ ಮಕ್ಕಳೊಂದಿಗೆ ಸ್ವಲ್ಪ ಸಮಯವಾದರು ಅವರ ವಿದ್ಯಾಭ್ಯಾಸದ ಬಗ್ಗೆ ಮಾತನಾಡಬೇಕು. ತಮ್ಮ ಮಕ್ಕಳಲ್ಲಿ ಧನಾತ್ಮಕವಾದ ಭಾವನೆ ಹಾಗೂ ಯೋಚನೆಗಳನ್ನು ತುಂಬಿ ಆತ್ಮ ವಿಶ್ವಾಸ ಬೆಳೆಸುವಂತೆ ಹೆತ್ತವರು ಹಾಗೂ ಶಿಕ್ಷಕರು ಪ್ರಯತ್ನ ಪಡಬೇಕು. ಒಬ್ಬ ವಿದ್ಯಾರ್ಥಿ ತನ್ನ ಚಿಕ್ಕ ವಯಸ್ಸಿನಲ್ಲೆ ಧನಾತ್ಮಕವಾದ ಆತ್ಮ ಗೌರವ ಹೊಂದಿದಾಗ ಮುಂದೆ ಉತ್ತಮ ಸಾಧಕನಾಗುತ್ತಾನೆ ಎಂದು ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ದೇವಾಡಿಗ ಸಂಘ(ರಿ.) ಮಣ್ಣಗುಡ್ಡ, ಮಂಗಳೂರು ಇದರ ಅಧ್ಯಕ್ಷರಾದ ಡಾ| ದೇವರಾಜ್ ಕೆ., ಅವರ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಯಲ್ಲಿ ಹೆತ್ತವರು ಮತ್ತು ಶಿಕ್ಷಕರು ಪ್ರಾಮುಖ್ಯವಾದ ಪಾತ್ರ ವಹಿಸಬೇಕು ಎಂದು ಕರೆ ನೀಡಿದರು. 
ಇದೇ ಸಂದರ್ಭದಲ್ಲಿ ಮಂಗಳೂರಿನ ಜೀವವಿಮಾ ನಿಗಮ, ಬ್ರಾಂಚ್-2, ಇದರ ಸೀನಿಯರ್ ಬ್ರಾಂಚ್ ಮೇನೇಜರ್ ಶ್ರೀ ವಿಜಯ ಕುಮಾರ್ರವರು ಶಾಲಾ ಬಿಮಾ ಯೋಜನೆಯ ಬಗ್ಗೆ ಮಾಹಿತಿ ನೀಡಿ, ಯೋಜನೆಯ ಪ್ರಯೋಜನಗಳನ್ನು ವಿವರಿಸಿದರು. 
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಉಷಾ ಪ್ರಭಾವತಿ ವಾರ್ಷಿಕ ವರದಿ ಮಂಡಿಸಿ, ಹೆತ್ತವರಿಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದರು. 
ಈ ಸಂದರ್ಭದಲ್ಲಿ ಶಾಲೆಯ ಹಳೆ ವಿದ್ಯಾರ್ಥಿನಿ ಕುಮಾರಿ ಅನುಷಾ ಎಸ್. ದೇವಾಡಿಗ ತನ್ನ ಸಿಎ ಪರೀಕ್ಷೆಯನ್ನು ಪ್ರಥಮ ಪ್ರಯತ್ನದಲ್ಲಿಯೇ ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಯಾಗಿರುವುದಕ್ಕೆ ಶಿಕ್ಷಕ-ರಕ್ಷಕ ಸಂಘದ ವತಿಯಿಂದ ಸನ್ಮಾನಿಸಲಾಯಿತು ಹಾಗೂ ಹತ್ತನೇ ತರಗತಿಯ 2017ರ ಮಾರ್ಚ್ನಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. >ಸನ್ಮಾನಿತರ ಪರವಾಗಿ ಅನುಷಾ ಎಸ್. ದೇವಾಡಿಗರು ಮಾತನಾಡಿ ಶಾಲೆಯ ಶಿಕ್ಷಕರು, ತನ್ನ ಹೆತ್ತವರನ್ನು ಮತ್ತು ಆಡಳಿತ ಮಂಡಳಿಯನ್ನು ಸ್ಮರಿಸಿ, ಕೃತಜ್ಞತೆಯನ್ನು ತಿಳಿಸಿದರು. ಮಹಾಸಭೆಯಲ್ಲಿ 2017-18ನೇ ಸಾಲಿನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. 
ಶ್ರೀಮತಿ ನೂರುನ್ನಿಸ ಅವರು ಅಧ್ಯಕ್ಷರಾಗಿ, ಶ್ರೀಮತಿ ಪುಷ್ಪಲತಾ ಉಪಾಧ್ಯಕ್ಷರಾಗಿ ಹಾಗೂ ಮೇಘನಾ ಎಂ. ಭಟ್ ಖಜಾಂಜಿಯಾಗಿ ಆಯ್ಕೆಯಾದರು. 13 ಮಂದಿಯನ್ನು ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಮಹಾಸಭೆ ನೇಮಿಸಿತು. 
ಶಿಕ್ಷಕ-ರಕ್ಷಕ ಸಂಘದ ನಿಬಂಧನೆಯನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಶಿವಾನಂದ ಮೊೈಲಿ, ಶ್ರೀ ಎಸ್. ರಾಮಚಂದ್ರ ದೇವಾಡಿಗ, ಶ್ರೀ ಕೃಷ್ಣಪ್ಪ ಎಂ. ದೇವಾಡಿಗ, ಶ್ರೀ ಭಾಸ್ಕರ ಇಡ್ಯಾ, ಶ್ರೀಮತಿ ಕುಸುಮ ಎಚ್. ದೇವಾಡಿಗ ಮತ್ತು ಶ್ರೀ ಕರುಣಾಕರ್ ಎಂ. ಎಚ್. ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು.
ಶಾಲಾ ಸಂಚಾಲಕ ಡಾ| ಸುಂದರ ಮೊೈಲಿ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮೀ ವಂದಿಸಿದರು. ಶಿಕ್ಷಕಿ ಶ್ರೀಮತಿ ಕಿರಣ್ ಕಾರ್ಯಕ್ರಮ ನಿರೂಪಿಸಿದರು.
 


Share