ದಕ್ಷಿಣ ವಲಯ ಕಿರಿಯರ ಕ್ರೀಡಾಕೂಟದಲ್ಲಿ ಉಡುಪಿಯ ಅಭಿನ್‌ ದೇವಾಡಿಗ 200 ಮೀ. ಓಟದಲ್ಲಿ ದಾಖಲೆ

ಉಡುಪಿ: ಉಡುಪಿ ಜಿಲ್ಲಾ ಅಮೆಚೂರ್‌ ಆ್ಯತ್ಲೆಟಿಕ್‌ ಅಸೋಸಿ ಯೇಶನ್‌ ವತಿಯಿಂದ ಉಡುಪಿ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣ ದಲ್ಲಿ ಜರಗಿದ 3 ದಿನಗಳ ಅಖೀಲ ಭಾರತ ದಕ್ಷಿಣ ವಲಯ ಕಿರಿಯರ ಕ್ರೀಡಾಕೂಟದಲ್ಲಿ ತಮಿಳುನಾಡು ತಂಡ ಸಮಗ್ರ ಚಾಂಪಿಯನ್‌ಶಿಪ್‌ ಗೆದ್ದುಕೊಂಡಿತು.

ರವಿವಾರ ಜರಗಿದ ಸಮಾರೋಪ ಸಮಾರಂಭದಲ್ಲಿ ಕ್ರೀಡಾಕೂಟ ಸಂಘಟನಾ ಸಮಿತಿ ಅಧ್ಯಕ್ಷ, ಉಡುಪಿ ಶಾಸಕ ಕೆ. ರಘುಪತಿ ಭಟ್‌ ಮತ್ತು ಆ್ಯತ್ಲೆಟಿಕ್‌ ಫೆಡರೇಶನ್‌ ಆಫ್ ಇಂಡಿಯಾದ ಕಾರ್ಯದರ್ಶಿ ವಿ.ಕೆ. ವಲ್ಸನ್‌ ಅವರು ಪ್ರಶಸ್ತಿ ವಿತರಿಸಿದರು.

ಉಡುಪಿಯಲ್ಲಿ ರಾಷ್ಟ್ರ ಮಟ್ಟದ ಕ್ರೀಡಾಕೂಟ
ಉಡುಪಿಯಲ್ಲಿ ಮುಂದಿನ ವರ್ಷ ರಾಷ್ಟ್ರಮಟ್ಟದ ಕ್ರೀಡಾಕೂಟವನ್ನು ನಡೆಸಲು ಆ್ಯತ್ಲೆಟಿಕ್‌ ಫೆಡರೇಷನ್‌ ಒಪ್ಪಿಗೆ ನೀಡಿದೆ. ಅದನ್ನು ನಡೆಸಲು ಜಿಲ್ಲೆ ಸಿದ್ಧವಾಗಿದೆ ಎಂದು ಶಾಸಕ ರಘುಪತಿ ಭಟ್‌ ಈ ಸಂದರ್ಭದಲ್ಲಿ ತಿಳಿಸಿದರು.

ಉಡುಪಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಡುಪಿ, ದ.ಕ. ಮೀನುಮಾರಾಟ ಫೆಡರೇಷನ್‌ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ, ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಅರುಣ್‌ ಕುಮಾರ್‌, ಕರ್ನಾಟಕ ಆ್ಯತ್ಲೆಟಿಕ್‌ ಅಸೋಸಿಯೇಷನ್‌ ಹಿರಿಯ ಉಪಾಧ್ಯಕ್ಷ ಎಚ್‌.ಟಿ. ಮಹಾದೇವ್‌, ಗೌರವ ಕಾರ್ಯದರ್ಶಿ ರಾಜವೇಲು, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕ್ರೀಡಾಕೂಟ ಸಂಘಟನಾ ಸಮಿತಿಯ ಕಾರ್ಯದರ್ಶಿ ಮಹೇಶ್‌ ಠಾಕೂರ್‌, ಉಡುಪಿ ಜಿಲ್ಲಾ ಅಮೆಚೂರ್‌ ಆ್ಯತ್ಲೆಟಿಕ್‌ ಅಸೋಸಿಯೇಶನ್‌ನ ಗೌರವಾಧ್ಯಕ್ಷ ಬಾಲಕೃಷ್ಣ ಹೆಗ್ಡೆ, ಅಧ್ಯಕ್ಷ ರಘುರಾಮ್‌ ನಾಯಕ್‌ ಎ., ಕಾರ್ಯದರ್ಶಿ ದಿನೇಶ್‌ ಕುಮಾರ್‌ ಎ., ಅಶೋಕ್‌ ಅಡ್ಯಂತಾಯ, ನಗರಸಭಾ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು. ಬಾಲಕೃಷ್ಣ ಮಡ್ಡೋಡಿ, ಯುವ ಸಶಕ್ತೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ| ರೋಶನ್‌ ಕುಮಾರ್‌ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ರಾಮಚಂದ್ರ ಪಾಟ್ಕರ್‌ ವಂದಿಸಿದರು.

ಕೂಟ ದಾಖಲೆಗಳು
ಮಹಿಳೆಯರ 20ರ ವಯೋಮಿತಿ ವಿಭಾಗದ ಶಾಟ್‌ಪುಟ್‌ನಲ್ಲಿ ಕರ್ನಾಟಕದ ಅಂಬಿಕಾ, ಹೈಜಂಪ್‌ನಲ್ಲಿ ಕೇರಳದ ಜಿಶ್ನಾ, ಮಹಿಳೆಯರ 16ರ ವಿಭಾಗದ ಜಾವೆಲಿನ್‌ನಲ್ಲಿ ಕರ್ನಾಟಕದ ರಮ್ಯಶ್ರೀ ಜೈನ್‌, ಮಹಿಳೆಯರ 18ರ ವಿಭಾಗದ 200 ಮೀ. ಓಟದಲ್ಲಿ ತೆಲಂಗಾಣದ ಜೀವಾಂಜಿ, ಮಹಿಳೆಯರ 20ರ ವಿಭಾಗದ 200 ಮೀ.ಓಟದಲ್ಲಿ ಕರ್ನಾಟಕದ ಕಾವೇರಿ ನೂತನ ಕೂಟ ದಾಖಲೆ ಸ್ಥಾಪಿಸಿದರು.

ಪುರುಷರ 20ರ ವಯೋಮಿತಿ ವಿಭಾಗದ 200 ಮೀಟರ್‌ ಓಟದಲ್ಲಿ ಕರ್ನಾಟಕದ ಅಬಿನ್‌ ದೇವಾಡಿಗ, ಮಹಿಳೆಯರ 20ರ ವಿಭಾಗದ ಸ್ಟೀಪಲ್‌ ಚೇಸ್‌ನಲ್ಲಿ ತೆಲಂಗಾಣದ ಜಿ. ಮಹೇಶ್ವರಿ, ಮಹಿಳೆಯರ 18ರ ವಿಭಾಗದ 100 ಮೀ. ಹರ್ಡಲ್ಸ್‌ನಲ್ಲಿ ತಮಿಳುನಾಡಿನ ತಬಿತಾ, ಇದೇ ವಿಭಾಗದಲ್ಲಿ ಡಿಸ್ಕಸ್‌ ತ್ರೋನಲ್ಲಿ ಆಂಧ್ರ ಪ್ರದೇಶದ ಕೃಷ್ಣಾ ಜಯಶಂಕರ್‌, ಮಹಿಳೆಯರ 20ರ ವಿಭಾಗದ 100 ಮೀ. ಓಟದಲ್ಲಿ ಕರ್ನಾಟಕದ ಕಾವೇರಿ, ಮಹಿಳೆಯರ 16ರ ವಿಭಾಗದ 100 ಮೀ. ಓಟದಲ್ಲಿ ತಮಿಳುನಾಡಿನ ಋತಿಕಾ, ಮಹಿಳೆಯರ 14ರ ವಿಭಾಗದ ಶಾಟ್‌ಪುಟ್‌ನಲ್ಲಿ ತಮಿಳುನಾಡಿನ ಮಧುಮಿತಾ ವಿ., ಮಹಿಳೆಯರ 20ರ ವಿಭಾಗದ ಜಾವೆಲಿನ್‌ ಎಸೆತದಲ್ಲಿ ಕರ್ನಾಟಕದ ಕರಿಷ್ಮಾ, ಮಹಿಳೆಯರ 16ರ ವಿಭಾಗದ ಲಾಂಗ್‌ಜಂಪ್‌ನಲ್ಲಿ ಕರ್ನಾಟಕದ ಶೈಲಿ ನೂತನ ದಾಖಲೆ ಬರೆದರು.


Share