ಹವ್ಯಾಸಿ ಯಕ್ಷ ಕಲಾವಿದ ಶ್ರೀ ಶಂಕರ ದೇವಾಡಿಗ ಕಾರ್ಕಡ

ಸಾಲಿಗ್ರಾಮ:  ಹವ್ಯಾಸಿ ಯಕ್ಷಗಾನ ರಂಗದಲ್ಲಿ ಎಲ್ಲಾ ರೀತಿಯ ವೇಷಗಳನ್ನು ಮಾಡುವರ ಸಂಖ್ಯೆ ಬಹಳಷ್ಟು ಕಡಿಮೆ ಇದೆ. ಹವ್ಯಾಸಿ ಕಲಾವಿದರಾದರೂ ಕೂಡ ಇಂತವರೇ ಇಂತಹ ವೇಷವನ್ನು ಮಾಡಿದರೆ ಆ ಪಾತ್ರಕ್ಕೆ ನ್ಯಾಯ ದೊರಕುತ್ತದೆ ಎಂದು ಸಂಘಟಕರೇ ಹೇಳುತ್ತಾರೆ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಸ್ತ್ರೀ ವೇಷ ಮಾಡುವವರ ಸಂಖ್ಯೆ ಬಹಳಷ್ಟು ಕಡಿಮೆ ಇದೆ. ಇಂತಹ ಸಮಯದಲ್ಲಿ ಸತತ 30 ವರ್ಷಗಳಿಂದ ಅನೇಕ ಸಂಘ ಸಂಸ್ಥೆಗಳಲ್ಲಿ ಸಂಪ್ರದಾಯ ಶೈಲಿಯಲ್ಲಿಯೇ ನಾಟ್ಯ, ಅಭಿನಯ, ಮಾತು ಹೀಗೆ ಯಕ್ಷಗಾನದ ಎಲ್ಲಾ ವಿಭಾಗಗಳಲ್ಲಿಯೂ ಕಲಾಭಿಮಾನಿಗಳ ಮನದಲ್ಲಿ ಸಂತಸವನ್ನು ಉಂಟು ಮಾಡಿದ ಹವ್ಯಾಸಿ ಯಕ್ಷ ಕಲಾವಿದ ಶ್ರೀ ಶಂಕರ ದೇವಾಡಿಗ ಕಾರ್ಕಡ. 

ಇವರು ಶ್ರೀ ಗೋವಿಂದ ದೇವಾಡಿಗ ಹಾಗೂ ಶ್ರೀಮತಿ ಪದ್ದು ದೇವಾಡಿಗರ ಮಗನಾಗಿ ಸಾಲಿಗ್ರಾಮದ ಕಾರ್ಕಡದಲ್ಲಿ 10.05.1967ರಲ್ಲಿ ಜನಿಸಿದರು

ಶಂಕರ ದೇವಾಡಿಗ ಬಾಲ್ಯದ ದಿನಗಳಲ್ಲಿ ಅಷ್ಟೇನು ಸುಖ:ಮಯವಾಗಿರಲಿಲ್ಲ. ಕಾರಣ ಮನೆಯಲ್ಲಿ ಕಿತ್ತು ತಿನ್ನುವ ಬಡತನ ಇತ್ತು.  ಇವರ ಬಡತನ ಎಷ್ಟರ ಮಟ್ಟಿಗೆ ಇತ್ತೆಂದರೆ ಆ ಕಾಲದಲ್ಲಿ ಶಾಲೆಯ ಶುಲ್ಕ 8 ರೂಪಾಯಿಯನ್ನು ನೀಡಲಾಗದೆ 6ನೇ ತರಗತಿಗೆ ವಿದ್ಯಾಭ್ಯಾಸವನ್ನು ಮುಗಿಸಿ ಉದ್ಯೋಗವನ್ನು ಹುಡುಕುವ ಪರಿಸ್ಥಿತಿ ಇವರದ್ದಾಯಿತು. ಶಾಲೆಯನ್ನು ಬಿಟ್ಟ ಇವರು ಸುಮಾರು 10 ವರ್ಷಗಳ ಕಾಲ ಪರ ಊರಿನಲ್ಲಿ ಹೋಟೆಲ್ನಲ್ಲಿ ದುಡಿದರು. ನಂತರ ಊರಿಗೆ ಮರಳಿದ ಇವರು ವಾಹನ ಚಾಲಕರಾಗಿ ದುಡಿಯಲು ಪ್ರಾರಂಭಿಸಿದರು.

ಆಸಮಯದಲ್ಲಿ ಕಾರ್ಕಡ ಗೆಳೆಯರ ಬಳಗದ ವತಿಯಿಂದ ಕಾರ್ಕಡದಲ್ಲಿ ಯಕ್ಷಗಾನ ತರಬೇತಿ ನಡೆಯುತಿತ್ತು. ಇವರು ಕುಟುಂಬದಲ್ಲಿ ಯಕ್ಷಗಾನ ಹಿನ್ನಲೆ ಇಲ್ಲದೇ ಇದ್ದರೂ ಕೂಡ 20 ವರ್ಷ ಪ್ರಾಯದ ಶಂಕರರಿಗೆ ಯಕ್ಷಗಾನದ ಆಸಕ್ತಿ ತುಂಬಾ ಇತ್ತು, ಹಾಗಾಗಿ ಇದೇ ಗೆಳೆಯರ ಬಳಗದಲ್ಲಿ ಯಕ್ಷಗಾನವನ್ನು ಕಲಿಯಲು ಪ್ರಾರಂಭಿಸಿದ ಇವರು ಮೊದಲಿಗೆ ಭೀಷ್ಮ ವಿಜಯದ ಧರಣಿ ಪಾಲಕ, ಚಂದ್ರಹಾಸ ಕೃಷ್ಣ, ಜಯಂತ ಕೌರವ, ಧರ್ಮರಾಯ ಹೀಗೆ ಅನೇಕ ಪುರಷ ವೇಷವನ್ನು ಮಾಡಿದ್ದರೂ ಕೂಡ ಕ್ರಮೇಣ ಇವರು ಸ್ತ್ರೀ ವೇಷವನ್ನು ಆಯ್ದುಕೊಂಡರು, ಸ್ತ್ರೀ ವೇಷವನ್ನು ಮಾಡಲು ಹಿಂಜರಿಯುತ್ತಿದ್ದ ನನಗೆ ಅದರ ಬಗ್ಗರ ಸಂಪೂರ್ಣ ಮಾಹಿತಿಯನ್ನು ನೀಡಿ ಧೈರ್ಯ ತುಂಬಿದವರು ಗುರುಗಳಾದ ಹಂದಟ್ಟು ಗೋವಿಂದ ಉರಾಳರೆಂದು ವಿನಮೃವಾಗಿ ನುಡಿಯುತ್ತಾರೆ. ಸುಗರ್ಭೆ, ಪ್ರಬಾವತಿ, ಅಂಬೆ, ದಾಕ್ಷಯಿಣಿ, ಚಂದ್ರಮತಿ ಹೀಗೆ ಎಲ್ಲಾ ಪ್ರಸಂಗಗಳಲ್ಲಿಯೂ ಪ್ರಧಾನ ಸ್ತ್ರೀ ವೇಷವನ್ನೇ ಮಾಡುವ ಶಂಕರರು ಸುಭದ್ರೆ, ವೃಂದೆ, ಸುರುಚಿ ತನ್ನ ಅಚ್ಚು ಮೆಚ್ಚಿನ ಪಾತ್ರ ಎನ್ನುತ್ತಾರೆ.

ಶಂಕರ ದೇವಾಡಿಗ ಮಣೂರು ಮಹಾಲಿಂಗೇಶ್ವರ ಕಲಾ ಸಂಘ; ಆಘೋರೇಶ್ವರ ಕಲಾರಂಗ ಚಿತ್ರಪಾಡಿ, ಕುಲಮಹಾಸ್ತ್ರಿ ಅಮ್ಮು ಬೆಣ್ಣೆಕುದ್ರು, ರಾಮ ಪ್ರಸಾದಿತ ಯಕ್ಷಗಾನ ಮಂಡಳಿ ಕೋಡಿ ಕನ್ಯಾನ, ಹೀಗೆ ಅನೇಕ ಸಂಘಗಳಲ್ಲಿ ಸೇವೆಯನ್ನು ಸಲ್ಲಿಸಿರುತ್ತಾರೆ. ಪ್ರಸ್ತುತ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಯಕ್ಷಗುರು ಶ್ರೀ ಪ್ರಸಾದ ಕುಮಾರ್ ಮೊಗಬೆಟ್ಟು ಸಾರಥ್ಯದ ಯಕ್ಷಸೌರಭ ಶ್ರೀ ಹಿರೇ ಮಹಾಲಿಂಗೇಶ್ವರ ಕಲಾರಂಗ ಕೋಟ ಇಲ್ಲಿಯ ಪ್ರಧಾನ ಸ್ತ್ರೀವೇಷದಾರಿಯಾಗಿ ಎಲ್ಲರ ಮೆಚ್ಚುಗೆಯನ್ನು ಪಡೆದಿರುತ್ತಾರೆ. ಇವರಲ್ಲಿಯ ಕಲೆ ಹಾಗೂ ಇವರ ಕಲಾ ಸೇವೆಯನ್ನು ಗುರುತಿಸಿ ಗಣೇಶೋತ್ಸವ ಸಮಿತಿ ಕೆದೂರು, ಅಘೋರೇಶವರ ಕಲಾರಂಗ ಚಿತ್ರಪಾಡಿ, ಕಲಾಮಹಾಸ್ತ್ರೀ ಅಮ್ಮ ಬೆಣ್ಣೆಕುದ್ರು, ದೇವಾಡಿಗ ಸಮಾಜ ಭಾಂದವರು ಕೋಟ-ಶಾಲಿಗ್ರಾಮ, ಕಾಶೀ ವಿಶ್ವೇಶ್ವರ ಬಳಗ ಕಾರ್ಕಡ, ಯಕ್ಷಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾರಂಗ ಕೋಟ ಹೀಗೆ ಹತ್ತು ಹಲವಾರು ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ, ಗೌರವಿಸಿ ಸನ್ಮಾನಿಸಿದೆ.

ಇತ್ತೀಚೆಗೆ ಉಡುಪಿ ಚಾನೆಲ್ನಲ್ಲಿ ಕೂಡ ಇವರ ಬಗ್ಗೆ ಸಂದರ್ಶನವನ್ನು ನಡೆಸಿ ಪ್ರಸಾರವನ್ನು ಮಾಡಿರುತ್ತಾರೆ. ವೃತ್ತಿಯಲ್ಲಿ ವಾಹನ ಚಾಲಕರಾಗಿರುವ ಶಂಕರರು, ಸ್ವಂತ ಸರಕು ಸಾಗಟವನ್ನು ವಾಹನವನ್ನು ಹೊಂದಿದ್ದು, ಸಾಲಿಗ್ರಾಮದ ಕಾರ್ಕಡದಲ್ಲಿ ಸ್ವಂತ ನಿವೇಶನವನ್ನು ಹೊಂದಿರುತ್ತಾರೆ. ಬಾಳ ಪಯಣದಲ್ಲಿ ತಾರಾಳನ್ನು ಸಂಗಾತಿಯನ್ನಾಗಿ ಪಡೆದು ಪ್ರೇಮದ ದ್ಯೋತಕವಾಗಿ ಶ್ವೇತಾಳನ್ನು ಮಗಳನ್ನಾಗಿ ಪಡದು ಸಂಸಾರದಲ್ಲಿ ಧನ್ಯತೆಯನ್ನು ಪಡೆದಿದ್ದಾರೆ.

ಶ್ರೀಯುತರ ಮುಂದಿನ ಕಲಾಜೀವನ ಹಾಗೂ ಸಾಂಸಾರಿಕ ಜೀವನ ಇನ್ನಷ್ಟು ಸುಖಮಯವಾಗಿರಲಿ ಎಂಬುದೇ ನಮ್ಮಲ್ಲರ ಆಶಯ.


Share