ವಿಜ್ಞಾನಕ್ಕೆ ಹೊಸ ದಿಕ್ಕು ನೀಡಿದ ಮಹಿಳೆ

ರೇಡಿಯಂ ಖ್ಯಾತಿಯ ಮೇಡಂ ಮೇರಿ ಕ್ಯೂರಿ ವಿಜಾnನ ಲೋಕದ ಆದರ್ಶ ಮಹಿಳೆ. ವಿಕಿರಣ ಶೀಲತೆ ಕುರಿತಾದ ಮಹತ್ವದ ಆವಿಷ್ಕಾರಗಳ ಮೂಲಕ ಪರಮಾಣು ವಿಜಾnನದ ಹೊಸ ಶಕೆಯನ್ನು ಪ್ರಾರಂಬಿಸಿ ತನ್ನ ಜೀವಿತಾವಧಿಯಲ್ಲಿಯೇ ದಂತ ಕತೆಯಾದ ಮೇರು ಅನ್ವೇಷಕಿ. ಅಂದಿನ ಸಮಾಜದಲ್ಲಿ ನೆಲೆಯೂರಿದ್ದ ಲಿಂಗ ತಾರತಮ್ಯದ ಪ್ರತಿಕೂಲ ಪರಿಸ್ಥಿತಿಯನ್ನೂ ಮೀರಿ ವೈಜಾnನಿಕ ಸಾಧನೆಯ ಮೂಲಕ ಸಾಮಾಜಿಕ ಪರಿವರ್ತನೆಗೆ ಶ್ರಮಿಸಿದ ಖ್ಯಾತಿ ಆಕೆಯದು. ಸಾಧನೆಗಳ ಹೆಗ್ಗಳಿಕೆ ವಿಜಾnನಕ್ಕೆ ಸಲ್ಲಬೇಕಲ್ಲದೆ ವ್ಯಕ್ತಿಗಲ್ಲ ಅನ್ನುವ ವಿನೀತ ಭಾವ ಅವರದು.

ಮೇರಿ ಕ್ಯೂರಿಯದ್ದು ವಿಶ್ವಮಟ್ಟದ ಹಲವು ಪ್ರಥಮಗಳ ಸಾಧನೆ. ನೋಬೆಲ್‌ ಬಹುಮಾನಿತ ಮಹಿಳೆಯರಲ್ಲಿ ಪ್ರಥಮಳಾದ ಈಕೆ ಎರಡು ಬಾರಿ ನೋಬೆಲ್‌ ಪ್ರಶಸ್ತಿ ಪಡೆದ ಏಕೈಕ ಮಹಿಳೆ. ಅಂದಿನ ದಿನಗಳಲ್ಲಿ ವಿಜಾnನದಲ್ಲಿ ಡಾಕ್ಟರೆಟ್‌ ಪಡೆದ ಹಾಗೂ ವಿಶ್ವವಿದ್ಯಾಲಯದ ಪ್ರಾಧ್ಯಾಪಿಕೆಯಾಗಿ ನೇಮಕಗೊಂಡ ಮಹಿಳೆಯರಲ್ಲಿ ಮೇರಿ ಮೊದಲಿಗಳು. ಪೆರಿಕ್ಯೂರಿ ಮತ್ತು ಮೇರಿ ನೋಬೆಲ್‌ ಪುರಸ್ಕೃತ ಪ್ರಥಮ ದಂಪತಿ. ಮೇರಿ ಮತ್ತು ಐರೀನ್‌ ಜೊಲಿಯಟ್‌ ಬೇರೆ ಬೇರೆ ವರ್ಷದಲ್ಲಿ ನೋಬೆಲ್‌ ಪಡೆದ ಏಕಮೇವ ತಾಯಿ ಮಗಳ ಜೋಡಿ!

ಮೇನ್ಯಾ (ಮರಿಯಾ ಸ್ಕೊÉàಡಿಸ್ಕಾ) ಹುಟ್ಟಿದ್ದು ಪೋಲೆಂಡಿನ ವಾರ್ಸಾದಲ್ಲಿ, 1867ರ ನವೆಂಬರ್‌ 7ರಂದು. ತಂದೆ ತಾಯಿ ಇಬ್ಬರೂ ಶಿಕ್ಷಕರು. ಪ್ರಾಥಮಿಕ ಶಿಕ್ಷಣದ ಜತೆ ತಂದೆಯಿಂದಲೇ ವಿಜಾnನ ಶಿಕ್ಷಣದಲ್ಲಿ ತರಬೇತಿ. ಅನಾರೋಗ್ಯಕ್ಕೆ ತುತ್ತಾಗಿ ತನ್ನ ತಾಯಿ, ನಂತರ ಅಕ್ಕನನ್ನೂ ಕಳೆದುಕೊಂಡು ಚಿಕ್ಕ ವಯಸಿನಲ್ಲೇ ಒದಗಿದ ಸಂಕಷ್ಟದ ಪರಿಸ್ಥಿತಿ. ಆದರೂ ಚಿನ್ನದ ಪದಕದೊಂದಿಗೆ 15ನೇ ವಯಸ್ಸಿನಲ್ಲಿಯೇ ಶಾಲಾ ಪದವಿ ಗಳಿಕೆ. ಮುಂದೆ ಎಂಟು ವರ್ಷಗಳ ಪಾಠ ಮಾಡಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ಹಣ ಗಳಿಕೆ. ಅಂದಿನ ದಿನಗಳಲ್ಲಿ ಉನ್ನತ ಶಿಕ್ಷಣದಲ್ಲಿ ಮಹಿಳೆಯರಿಗೆ ಅವಕಾಶ ನಿರಾಕರಣೆಯಂತಹ ಲಿಂಗ ತಾರತಮ್ಯದ ಪ್ರತಿಕೂಲ ಪರಿಸ್ಥಿತಿಯನ್ನು ನಿಭಾಯಿಸಲು ಫ್ರಾನ್ಸ್‌ಗೆ ಪ್ರಯಾಣ. ಮರಿಯಾ, ಮೇರಿ ಆದದ್ದು ಪ್ಯಾರಿಸ್ಸಿನಲ್ಲಿ! ಅಲ್ಲಿ ಭೌತಶಾಸ್ತ್ರ ಹಾಗೂ ಗಣಿತ ಶಾಸ್ತ್ರದಲ್ಲಿ ಪದವಿ ಅಭ್ಯಾಸ. ಭೌತಶಾಸ್ತ್ರದ ಪ್ರಾಧ್ಯಾಪಕ ಪೆರಿಕ್ಯೂರಿ ಜೊತೆಗೆ ಬೆಳೆದ ಗೆಳೆತನ ಮದುವೆಯಲ್ಲಿ ಸುಖಾಂತ್ಯ. ಪೆರಿಕ್ಯೂರಿ ಮೇರಿಯ ಪ್ರಿಯಕರ ಮಾತ್ರವಲ್ಲ ಆಕೆಯ ಜತೆಗಾರ ಮತ್ತು ಸಹೋದ್ಯೋಗಿ ಕೂಡಾ.

20ನೇ ಶತಮಾನದ ಪ್ರಾರಂಭದ ದಿನಗಳು ಭೌತಶಾಸ್ತ್ರ ಮತ್ತು ರಸಾಯನ ಶಾಸ್ತ್ರಗಳಲ್ಲಿ ಅತ್ಯಂತ ಮಹತ್ತರ ಮತ್ತು ಈಪಾಕ್‌ ಮೇಕಿಂಗ್‌ ಅವಿಷ್ಕಾರಗಳು ನಡೆಯುತ್ತಿದ್ದ ಕಾಲ ಘಟ್ಟ. ಜರ್ಮನ್‌ ಭೌತ ವಿಜಾnನಿ ರೊನೆಟ್‌ಜನ್‌ 1895ರಲ್ಲಿ ಬೆಳಕಿಗಿಂತಲೂ ತೀಕ್ಷ್ಣವಾದ ಕ್ಷ-ಕಿರಣವನ್ನು (ಎಕ್ಸ್‌ರೇ) ಪತ್ತೆ ಮಾಡಿದ. ತಕ್ಷಣ ಅದು ಬಳಕೆಗೆ ಬಂದದ್ದು ವೈದ್ಯಕೀಯದಲ್ಲಿ. ಮಾನವ ದೇಹದ ಎಲುಬಿನ ಹಂದರ, ದೇಹದಲ್ಲಿ ಆಕಸ್ಮಿಕವಾಗಿ ಸೇರಿರಬಹುದಾದ ಬುಲೆಟ್‌, ಗಾಜಿನ ಚೂರು ಮುಂತಾದ ಬಾಹ್ಯ ವಸ್ತುಗಳು, ದೇಹದಲ್ಲಿಯ ಯಾವುದೇ ಅಂಗದ ಅಸ್ವಸ್ಥತೆ, ಇತ್ಯಾದಿ ಮಾಹಿತಿ ಎಕ್ಸ್‌ರೇ ಛಾಯಾಚಿತ್ರದಲ್ಲಿ ನಿಖರವಾಗಿ ಪ್ರಕಟವಾಗಿ, ವೈದ್ಯರು ನಡೆಸುವ ಶುಶ್ರೂಷೆ, ಶಸ್ತ್ರಕ್ರಿಯೆಗಳಿಗೆ ವರದಾನವಾಯಿತು. ಇದಕ್ಕಾಗಿ ಭೌತಶಾಸ್ತ್ರದ ಪ್ರಥಮ ನೋಬೆಲ್‌ ಪ್ರಶಸ್ತಿ ರೊನೆಟ್‌ಜನ್‌ನನ್ನು ಅರಸಿಕೊಂಡು ಬಂತು.

ಈ ಎರಡು ಆವಿಷ್ಕಾರಗಳಿಂದ ಪ್ರಭಾವಿತಳಾದ ಮೇರಿಕ್ಯೂರಿ ವಿಕರಣದ ಕುರಿತಾದ ತಮ್ಮ ಡಾಕ್ಟೋರಲ್‌ ಸಂಶೋಧನೆಯನ್ನು ಬೆಕ್ವಿರಲ್‌ನ ಮಾರ್ಗದರ್ಶನದಲ್ಲಿಯೇ ನಡೆಸಿದರು. ಯುರೇನಿಯಂ ಮಾತ್ರವಲ್ಲದೆ, ಥೋರಿಯಂ ಮುಂತಾದ ಇನ್ನೂ ಬೇರೆ ಧಾತುಗಳು ಬೆಕ್ವಿರಲ್‌ ಕಿರಣಗಳನ್ನು ಹೊರಸೂಸುತ್ತವೆ ಎನ್ನುವುದು ಕ್ಯೂರಿಯ ಸಂಶೋಧನೆಯ ತಿರುಳು. ಈ ಕ್ರಿಯೆಗೆ ವಿಕರಣಶೀಲತೆ ಎಂದು ಹೆಸರಿಸಿದ್ದು ಮೇರಿಕ್ಯೂರಿ.

ಮೇರಿಕ್ಯೂರಿ ರಸಾಯನ ಶಾಸ್ತ್ರಜ್ಞಳಾಗಿ ವಿಕಿರಣಶೀಲ ಧಾತುಗಳನ್ನು ಬೇರ್ಪಡಿಸುವ, ಸಂಸ್ಕರಿಸಿ ಶುದ್ಧೀಕರಿಸುವ ಕಾರ್ಯದಲ್ಲಿ ಮಗ್ನಳಾಗಿದ್ದರೆ, ಪೆರಿಕ್ಯೂರಿ ಸಂಸ್ಕರಿಸಲ್ಪಟ್ಟ ಧಾತುಗಳ ಭೌತಗುಣಲಕ್ಷಣಗಳನ್ನು ವಿಶ್ಲೇಷಿಸುವ ಕೆಲಸದಲ್ಲಿ ಸಹಕರಿಸುತ್ತಿದ್ದ. ಯುರೇನಿಯಂ ಖನಿಜಗಳು ಹೊರಸೂಸುವ ವಿಕಿರಣದ ಮಟ್ಟವನ್ನು ಆಧರಿಸಿ, ಯುರೇನಿಯಂ ಧಾತುಗಳಿಗಿಂತಲೂ ಹೆಚ್ಚು ವಿಕಿರಣಶೀಲ ಧಾತುಗಳು ಆ ಖನಿಜಗಳಲ್ಲಿ ಅಡಕವಾಗಿದೆ ಎಂದು ಮೇರಿಗೆ ಹೊಳೆಯಿತು. ಟನ್ನುಗಟ್ಟಳೆ ಪಿಚ್‌ಬ್ಲೆಂಡನ್ನು ರಾಸಾಯನಿಕ ಕ್ರಿಯೆ ಮೂಲಕ ಸಂಸ್ಕರಿಸಿ ಮೈಕ್ರೋಗ್ರಾಂ ತೂಕದ ರೇಡಿಯಂ ಪಡೆಯುವುದು, ಬೆಟ್ಟವನ್ನೂ ಅಗೆದು ನಿಧಿ ಹುಡುಕುವಂತಹ ಪ್ರಯಾಸದ ಕೆಲಸ. ಈ ರೀತಿ ಬೆಳಕಿಗೆ ಬಂದ ವಿಕಿರಣಪಟು ಧಾತುಗಳೇ ಪೊಲೋನಿಯಂ (ಮೇರಿಯ ಜನ್ಮಭೂಮಿ ಪೊಲೆಂಡ್‌ ಗೌರವಾರ್ಥ) ಮತ್ತು ಅದಕ್ಕಿಂತಲೂ ಹೆಚ್ಚು ತೀಕ್ಷಣವಾದ ರೇಡಿಯಂ.

ವಿಕಿರಣದ ಉಗಮ ಪರಮಾಣುವಿನ ಒಡಲಿನಿಂದಲೇ ಹೊರತು ಹೊರಗಿನ ಭೌತಿಕ ಅಥವಾ ರಾಸಾಯನಿಕ ಪರಿಸರದಿಂದಲ್ಲ ಎಂಬ ರಹಸ್ಯ ಭೇದಿಸಿದ್ದು ಮೇರಿಕ್ಯೂರಿಯ ಅಪೂರ್ವ ಸಾಧನೆ. ಇದು ಪರಮಾಣುವಿನ ಒಳ ರಚನೆಯ ಸುಳಿವನ್ನು ನೀಡಿ ಇತರ ಅನ್ವೇಷಕರಿಗೆ ದಾರಿದೀಪವಾಯಿತು. ನಂತರ ಇದು ಪರಮಾಣು ಯುಗದ ಪ್ರಾರಂಭಕ್ಕೆ ನಾಂದಿಯಾಯಿತು.

1903ರ ಭೌತಶಾಸ್ತ್ರದ ನೋಬೆಲ್‌ ಪುರಸ್ಕಾರವನ್ನು ಹೆನ್ರಿ ಬೆಕ್ವಿರಲ್‌, ಮೇರಿಕ್ಯೂರಿ ಮತ್ತು ಪೆರಿಕ್ಯೂರಿಯವರಿಗೆ ಹಂಚಿಕೆ ಮಾಡಿ ನೀಡಲಾಯಿತು. ವಿಶ್ವಾದ್ಯಂತ ಮೇರಿ ಮತ್ತು ಪೆರಿಕ್ಯೂರಿಗೆ ಆದರ್ಶ ದಂಪತಿ ಸ್ಥಾನಮಾನ ಪ್ರಾಪ್ತಿಯಾಯಿತು. ಪೆರಿಕ್ಯೂರಿಯನ್ನು ಪ್ಯಾರಿಸ್‌ ವಿವಿ ಪ್ರಾಧ್ಯಾಪಕರನ್ನಾಗಿ ಮತ್ತು ಮೇರಿಯನ್ನು ಸಂಶೋಧನಾ ನಿರ್ದೇಶಕರನ್ನಾಗಿ ನೇಮಿಸಲಾಯಿತು. ಆದರೆ ದುರದೃಷ್ಟವಶಾತ್‌ ಆ ಅವಧಿಯಲ್ಲೇ ರಸ್ತೆ ಅಪಘಾತದಲ್ಲಿ ಪೆರಿಕ್ಯೂರಿ ಮರಣ ಹೊಂದಿದರು. ಆದರೂ ಎದೆಗುಂದದೆ ತಮ್ಮ ಇಬ್ಬರು ಹೆಣ್ಣು ಮಕ್ಕಳ ಪಾಲನೆಯೊಂದಿಗೆ, ಚ್ಯುತಿ ಬಾರದ ರೀತಿಯಲ್ಲಿ ವಿಕಿರಣದ ಅನ್ವೇಷಣೆಯನ್ನು ಮುಂದುವರೆಸಿದ್ದು ಮೇರಿಕ್ಯೂರಿಯ ಧೈರ್ಯಕ್ಕೆ ಸಾಕ್ಷಿ.

ಗಂಡನ ಮರಣಾನಂತರ ತೆರವಾದ ಹುದ್ದೆಗೆ ಪ್ರಥಮ ಮಹಿಳಾ ಪ್ರಾಧ್ಯಾಪಿಕೆಯಾಗಿ ಮೇಡಂ ಕ್ಯೂರಿ ನೇಮಕಗೊಂಡರು. ಅನ್ವೇಷಣೆಗಳ ಮೂಲಕ ರಸಾಯನ ವಿಜಾnನದ ವಿಸ್ತರಣೆಗೆ ಶ್ರಮಿಸಿದ್ದಕ್ಕಾಗಿ ಎರಡನೇ ಬಾರಿ 1911ರ ರಸಾಯನ ಶಾಸ್ತ್ರದ ನೋಬೆಲ್‌ ಬಹುಮಾನ ಅವರಿಗೆ ಬಂತು. ಮೊದಲನೇ ಮಹಾಯುದ್ಧದಲ್ಲಿ ಮಗಳು ಐರೀನ್‌ ಜತೆಗೂಡಿ ಮಿಲಿಟರಿ ಆಸ್ಪತ್ರೆಯ ದಾದಿಯರಿಗೆ ಎಕ್ಸ್‌ರೇ ರೇಡಿಯೋಗ್ರಫಿಯಲ್ಲಿ ತರಬೇತಿ ನೀಡಿ ಲಕ್ಷಾಂತರ ಗಾಯಾಳು ಸೈನಿಕರ ಎಕ್ಸ್‌ರೇ ತಪಾಸಣೆಗೈದ ಅವರ ಮಾನವೀಯತೆ ಮೆಚ್ಚುವಂತದ್ದು. ಸಂಶೋಧನೆಯ ಫ‌ಲ ಜನಸಾಮಾನ್ಯರಿಗೆ ನಿಲುಕುವಂತಾಗಲು ರೇಡಿಯಂ ಸಂಸ್ಕರಣ ವಿಧಾನವನ್ನು ಪೇಟೆಂಟ್‌ ಮಾಡದೆ ಉಚಿತವಾಗಿ ನೀಡಿದರು. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ತಾರತಮ್ಯಕ್ಕೊಳಗಾದ ಮಹಿಳೆಯರನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಸಂಶೋಧನೆಯಲ್ಲಿ ತೊಡಗಿಸಿ, ವಿಜಾnನ ಕ್ಷೇತ್ರದಲ್ಲಿ ಮಹಿಳಾ ಪ್ರಾತಿನಿಧ್ಯದ ವೃದ್ಧಿಗೆ ನೆರವಾದರು. ಅವರ ಗರಡಿಯಲ್ಲಿ ತರಬೇತಿ ಪಡೆದ ಮಹಿಳಾ ಸಂಶೋಧಕರಲ್ಲಿ ಕೆಲವರು ಮುಂದೆ ನೋಬೆಲ್‌ ಪಡೆದರು.

ಮೇರಿಕ್ಯೂರಿಯ ಹಿರಿ ಮಗಳು ಐರೀನ್‌ ತಾಯಿಯ ಹೆಜ್ಜೆಯನ್ನೇ ಅನುಸರಿಸಿ ತನ್ನ ಪತಿ ಫ್ರೆಡ್ರಿಕ್‌ ಜೊಲಿಯಟ್‌ ಜತೆಯಲ್ಲಿ ಭೌತಶಾಸ್ತ್ರದಲ್ಲಿ ಸಂಶೋಧನೆ ನಡೆಸಿ ಕೃತಕ ವಿಕಿರಣಶೀಲತೆಯ ಆವಿಷ್ಕಾರಕ್ಕಾಗಿ ಭೌತಶಾಸ್ತ್ರದಲ್ಲಿ ನೋಬೆಲ್‌ ಪಡೆದದ್ದು ಐತಿಹಾಸಿಕ ದಾಖಲೆ.

ವಿಜಾnನ ಎರಡಲಗಿನ ಕತ್ತಿಯಂತೆ, ನಿವಾರಕವೂ ಹೌದು, ಮಾರಕವೂ ಆದೀತು. ವಿಕಿರಣವು ಎಷ್ಟರ ಮಟ್ಟಿಗೆ ರೋಗ ನಿವಾರಕವೋ, ಅಷ್ಟೇ ಹಾನಿಕಾರಕವೂ ಆಗಿದೆ. ದೀರ್ಘ‌ಕಾಲದ ವಿಕಿರಣದ ಸಂಪರ್ಕದಿಂದ ಮೇರಿ ರಕ್ತದ ಕ್ಯಾನ್ಸರಿಗೆ ತುತ್ತಾಗಿ ಚಿರಶಾಂತಿ ಹೊಂದಿದ್ದು 1934ರಲ್ಲಿ. ಜನರಿಗೆ ವರದಾನವಾಗಿ, ಯುದ್ಧಗಳಲ್ಲಿ ರಾಸಾಯನಿಕ ಶಸ್ತ್ರವಾಗಿ ಬಳಕೆ ಆಗುತ್ತಿರುವ ವಿಕಿರಣ ಮೇಡಮ್‌ ಕ್ಯೂರಿಯ ಪ್ರಾಣವನ್ನೇ ತೆಗೆದುಕೊಂಡಿತು. ಆಗೋಚರ ತಣ್ಣನೆಯ ಶತ್ರುವಿನೊಂದಿಗೆ ಸರಸ ಪ್ರಾಣಾಂತಿಕವಾಗಬಹುದೆಂದು ಆಕೆ ಊಹಿಸಲಾರದೆ ಹೋದಳು!

--- ಡಾ| ಬಿ.ಎಸ್‌.ಶೇರಿಗಾರ್‌

 


Share