‘ಕಾಲದ ಅನುಭವದಲ್ಲಿ ರಾಮನ ವ್ಯಕ್ತಿತ್ವ’ - ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಧಾನಸೌಧದಲ್ಲಿ ಮೊಯಿಲಿ ಅವರಿಗೆ ಅಭಿನಂದನಾ ಕಾರ್ಯಕ್ರಮ

ಕಾಲದ ಅನುಭವದಲ್ಲಿ ರಾಮನ ವ್ಯಕ್ತಿತ್ವ

ಬೆಂಗಳೂರು: ‘ಶ್ರೀ ರಾಮಾಯಣ ಮಹಾನ್ವೇಷಣಂ ಕೃತಿಯಲ್ಲಿ ಎಂ. ವೀರಪ್ಪ ಮೊಯಿಲಿ ಅವರು ರಾಮನ ವ್ಯಕ್ತಿತ್ವವನ್ನು ಈ ಕಾಲದ ಅನುಭವದ ಹಿನ್ನೆಲೆಯಲ್ಲಿ ಕಟ್ಟಿಕೊಟ್ಟಿದ್ದಾರೆ’ ಎಂದು ವಿಮರ್ಶಕ ಪ್ರೊ.ಎಂ.ಎಚ್. ಕೃಷ್ಣಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ಮೊಯಿಲಿ ಅವರಿಗೆ ‘ಸರಸ್ವತಿ ಸಮ್ಮಾನ್’ ಪ್ರಶಸ್ತಿ ಬಂದಿರುವ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಧಾನಸೌಧದಲ್ಲಿ ಮೊಯಿಲಿ ಅವರಿಗೆ ಅಭಿನಂದನಾ ಕಾರ್ಯಕ್ರಮ ಆಯೋಜಿಸಿತ್ತು.

ಕೆ.ಕೆ. ಬಿರ್ಲಾ ಪ್ರತಿಷ್ಠಾನ ನೀಡುವ ‘ಸರಸ್ವತಿ ಸಮ್ಮಾನ್’ ಪ್ರಶಸ್ತಿಗೆ ಪಾತ್ರರಾದ ಎರಡನೆಯ ಕನ್ನಡಿಗ ಮೊಯಿಲಿ. ಸಾಹಿತಿ ಎಸ್.ಎಲ್. ಭೈರಪ್ಪ ಅವರ ‘ಮಂದ್ರ’ ಕಾದಂಬರಿಗೆ ಈ ಪ್ರಶಸ್ತಿ ಲಭಿಸಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಕೃಷ್ಣಯ್ಯ ಅವರು, ‘ಹಲವು ಸಮಾಜ, ಸಂಸ್ಕೃತಿಗಳ ಹಿನ್ನೆಲೆಯಲ್ಲಿ ಮೊಯಿಲಿಯವರು ರಾಮಾಯಣ ಮಹಾನ್ವೇಷಣಂ ಕೃತಿಯಲ್ಲಿ ಆದರ್ಶ ರಾಜ್ಯದ ದರ್ಶನವನ್ನು ನೀಡಿದ್ದಾರೆ’ ಎಂದರು.

ಮೊಯಿಲಿಯವರು ನೊಂದವರ ಮತ್ತು ತುಳಿತಕ್ಕೆ ಒಳಗಾದವರ ದನಿಯಾಗಿದ್ದಾರೆ ಎಂಬುದು ಈ ಕೃತಿಯಲ್ಲಿ ಲಕ್ಷ್ಮಣ ಆಡುವ ಕೆಲವು ಮಾತುಗಳಲ್ಲಿ ಗೊತ್ತಾಗುತ್ತದೆ ಎಂದು ಹೇಳಿದರು.

‘ಈ ಕೃತಿಯನ್ನು ಬರೆಯುವ ಮುನ್ನ ಐದು ವರ್ಷಗಳನ್ನು ಅಧ್ಯಯನಕ್ಕೇ ಮೀಸಲಿಟ್ಟೆ. ನನ್ನ ನನಸಾಗದ ಕೆಲವು ಕನಸುಗಳನ್ನು ಈ ಕೃತಿಯಲ್ಲಿ ಕಾಣಬಹುದು’ ಎಂದು ಮೊಯಿಲಿ ಹೇಳಿದರು.

‘ರಾಮ ವನವಾಸದಲ್ಲಿದ್ದ 14 ವರ್ಷಗಳ ಅವಧಿಯಲ್ಲಿ ಅಯೋಧ್ಯೆಯನ್ನು ಭರತ ಆಳಲಿಲ್ಲ. ಅಲ್ಲಿನ ಜನರೇ ಅಯೋಧ್ಯೆಯನ್ನು ಆಳಿಕೊಂಡರು. ಇಂಥದ್ದೊಂದು ಪ್ರಜಾತಂತ್ರದ ಕಲ್ಪನೆ ಇರುವುದು ರಾಮಾಯಣದಲ್ಲಿ ಮಾತ್ರ. ರಾಮಾಯಣದಲ್ಲಿ ಆಕ್ರಮಣಶಾಲಿ ಮನಸ್ಥಿತಿ ಇಲ್ಲ’ ಎಂದರು.

ಸಣ್ಣ ಸಮುದಾಯದಲ್ಲಿ ಜನಿಸಿ ಮೊಯಿಲಿ ಇಂದು ದೊಡ್ಡ ಸ್ಥಾನ ತಲುಪಿದ್ದಾರೆ. ಇಂದಿಗೂ ಸಾಹಿತ್ಯದ ಅಧ್ಯಯನದಲ್ಲಿ ತೊಡಗಿಕೊಳ್ಳುತ್ತಾರೆ. ಇದು ಹೆಮ್ಮೆಯ ಸಂಗತಿ ಎಂದರು. ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಸಚಿವ ಕೆ.ಜೆ. ಜಾರ್ಜ್, ಬೆಂಗಳೂರು ಮೇಯರ್ ಬಿ.ಎನ್. ಮಂಜುನಾಥ ರೆಡ್ಡಿ ವೇದಿಕೆಯಲ್ಲಿದ್ದರು.

 

 


Share