ಮೊಯ್ಲಿಯವರ ರಾಮಾಯಣ ಮಹಾನ್ವೇಷಣಕ್ಕೆ ಸರಸ್ವತೀ ಸಮ್ಮಾನ

ವೀರಪ್ಪ ಮ್ಲೊಯ್ಲಿ ಒಬ್ಬ ಅಪರೂಪದ ರಾಜಕಾರಣಿ-ಸಾಹಿತಿ. ಕನ್ನಡದ ಲೇಖಕರಾಗಿ ಈಗಾಗಲೇ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿರುವ ಅವರು ಇದುವರೆಗೆ ನಾಲ್ಕು ಕಾದಂಬರಿಗಳನ್ನು, ಮೂರು ಕವನ ಸಂಕಲನಗಳನ್ನು , ಮೂರು ನಾಟಕ ಕೃತಿಗಳನ್ನು , ಪ್ರಬಂಧಗಳ ಸಂಗ್ರಹಗಳನ್ನು ಮಾತ್ರವಲ್ಲದೆ ಐದು ಸಂಪುಟಗಳ ಶ್ರೀರಾಮಾಯಣ ಮಹಾನ್ವೇಷಣಮ್‌ ಹಾಗೂ ಮಹಾಭಾರತದ ಕಥಾವಸ್ತುವನ್ನು ಆಧರಿಸಿದ "ಸಿರಿಮುಡಿಯ ಪರಿಕ್ರಮ' ಎಂಬ ಮಹತ್ತಾಕಾಂಕ್ಷೆಯ ದೀರ್ಘ‌ ಕಾವ್ಯಕೃತಿಗಳನ್ನೂ ನೀಡಿದ್ದಾರೆ. ಮ್ಯೂಸಿಂಗ್ಸ್‌ ಆನ್‌ ಇಂಡಿಯಾ ಎಂಬ ಅವರ ಇನ್ನೊಂದು ಕೃತಿ, ಭಾರತೀಯ ಇತಿಹಾಸ, ಸಂಸ್ಕೃತಿ ಹಾಗೂ ಸಮಾಜ ಕುರಿತಂತೆ ಅವರು ಬರೆದಿರುವ ಲೇಖನಗಳ ಹಾಗೂ ಮಾಡಿರುವ ಭಾಷಣಗಳ ಸಂಗ್ರಹ.

ವೇರ್‌ ಮೈಂಡ್‌ ಈಸ್‌ ವಿದೌಟ್‌ ಫಿಯರ್‌ ಎಂಬುದು ಡಾ| ಶಶಿಧರ ಮೂರ್ತಿ ಹಾಗೂ ಪಾಲ್‌ ವರ್ಗೀಸ್‌ ಇವರುಗಳು ಇಂಗ್ಲಿಷ್‌ನಲ್ಲಿ ರಚಿಸಿರುವ ಮೊಲಿಯವರ ಜೀವನಚರಿತ್ರೆ. ಅವರ ಕೃತಿಗಳ ಮೇಲಿನ ವಿಮರ್ಶಾ ಲೇಖನಗಳ ಸಂಗ್ರಹವೂ ಬಂದಿದೆ. ಅವರ ಮಹಣ್ತೀದ ಕಾದಂಬರಿಗಳಲ್ಲೊಂದಾಗಿರುವ ಕೊಟ್ಟ, ಎಂ.ಎಸ್‌. ಸತ್ಯು ಅವರ ನಿರ್ದೇಶನದಲ್ಲಿ ಕನ್ನಡ ಹಾಗೂ ಹಿಂದಿಯಲ್ಲಿ ಚಲನಚಿತ್ರವಾಗಿ ಅಸಂಖ್ಯಾತ ಪ್ರೇಕ್ಷಕರನ್ನು ತಲುಪಿದೆ. ಕೊಟ್ಟ ಹಾಗೂ ಇನ್ನೊಂದು ಕಾದಂಬರಿ ತೆಂಬರೆ, ಹಿಂದಿ, ಇಂಗ್ಲಿಷ್‌ ಹಾಗೂ ಇತರ ಹಲವು ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ. ಶ್ರೀರಾಮಾಯಣ ಮಹಾನ್ವೇಷಣಂ ಮಹಾಕಾವ್ಯ ಈಗಾಗಲೇ ಇಂಗ್ಲಿಷ್‌, ಹಿಂದಿ, ತೆಲುಗು ಹಾಗೂ ತಮಿಳು ಭಾಷೆಗಳಿಗೂ ತರ್ಜುಮೆಗೊಂಡಿದೆ.

ಒಬ್ಬ ಸಾಹಿತಿಯಾಗಿ ಮ್ಲೊಯ್ಲಿ ಶೋಷಿತ/ಅವಕಾಶವಂಚಿತ ವರ್ಗದ ಬಗೆಗಿನ ಕಾಳಜಿಯನ್ನು ಮೈಗೂಡಿಸಿಕೊಂಡಿದ್ದಾರೆಂಬುದನ್ನು ಈಗಾಗಲೇ ಗುರುತಿಸಲಾಗಿದೆ. ಹಾಗೆಯೇ ಅವರ ಪಾತ್ರ-ಸನ್ನಿವೇಶಗಳ ಚಿತ್ರಣವೂ ನೈಜವಾಗಿರುತ್ತದೆ, ಪ್ರಾಮಾಣಿಕವಾಗಿರುತ್ತದೆ. ಅವರ ಸಾಹಿತ್ಯಿಕ ಕೃತಿಗಳಲ್ಲಿ ನುರಿತ ಕಲೆಗಾರಿಕೆ ಮೇಳೈಸಿರುವುದನ್ನೂ ಗುರುತಿಸಲಾಗಿದೆ.

ಅವರ ಮಹಣ್ತೀದ ಕೃತಿಗಳ ಹಿಂದೆ ವ್ಯಾಪಕ ಸಂಶೋಧನ ಪರಿಶ್ರಮವಿರುತ್ತದೆ. ತಾನು ನಿರ್ವಹಿಸಹೊರಡುವ ವಸ್ತು-ವಿಷಯಗಳಿಗೆ ಸಂಬಂಧಿಸಿದಂತೆ ತಜ್ಞರೊಂದಿಗೆ ಸಾಕಷ್ಟು ಚರ್ಚೆಯನ್ನು ಮಾಡಿಯೇ ಅವರು ಕೃತಿರಚನೆಗೆ ಮುಂದಾಗುವುದು. ಹೀಗೆಂದೇ ಅವರ ಕೃತಿಗಳಿಗೆ ಕನ್ನಡದಲ್ಲಿ ತಮ್ಮದೇ ಪ್ರಮುಖ ಸ್ಥಾನವಿದೆ.

ಅನೇಕ ಪ್ರಶಸ್ತಿ-ಗೌರವಗಳೂ ಅವರನ್ನು ಅರಸಿಕೊಂಡು ಬಂದಿವೆ. ಇವುಗಳಲ್ಲಿ ಮುಖ್ಯವಾದವು - ವರ್ಷ ಕೊಡಮಾಡಲಾಗಿರುವ ಪ್ರತಿಷ್ಠಿತ ಸರಸ್ವತೀ ಸಮ್ಮಾನ್‌, 2009ರಲ್ಲಿ ದೊರೆತ ಮೂರ್ತಿದೇವಿ ಪ್ರಶಸ್ತಿ, 2000ದಲ್ಲಿ ಬಂದ ಅಮೀನ್ಸದ್ಭಾವನಾ ಪ್ರಶಸ್ತಿ. ಜತೆಗೆ, ದೇವರಾಜ ಅರಸ್ಪ್ರಶಸ್ತಿ (2001), ಡಾ | ಬಿ. ಆರ್‌. ಅಂಬೇಡ್ಕರ್ಪ್ರಶಸ್ತಿ (2002), ಮಂಗಳೂರು ವಿ.ವಿ.ಯಿಂದ ಗೌರವ ಡಾಕ್ಟರೇಟ್‌ (2009), ಇತ್ಯಾದಿ.

 

ರಾಮಾಯಣ ಮಹಾನ್ವೇಷಣಂ
ಕಳೆದ ಕನಿಷ್ಠ 2000 ವರ್ಷಗಳಿಂದಲೂ ರಾಮನ ಕಥೆಯನ್ನು ಹಲವು ರೀತಿಗಳಲ್ಲಿ , ಹಲವು ಭಾಷೆಗಳಲ್ಲಿ ಮರುಕಥಿಸಲಾಗುತ್ತ ಬರಲಾಗಿದೆ. ರಾಮಾಯಣದ ಕಥೆ ಭಾರತೀಯ ಮನಸ್ಸನ್ನು ಇಷ್ಟೊಂದು ಗಾಢವಾಗಿ ತಟ್ಟಿದೆ. ಕನ್ನಡದಲ್ಲಿ ರಾಮಾಯಣದ ಮರುಕಥನ ಪರಂಪರೆ ಆರಂಭಗೊಂಡಿರುವುದು 12ನೆಯ ಶತಮಾನದ ಕವಿ ನಾಗಚಂದ್ರನಿಂದ. ಈತನ ಕೃತಿಯಾದ ರಾಮಚಂದ್ರ ಚರಿತ ಪುರಾಣ ರೂಪು ಪಡೆದಿರುವುದು ಜೈನ ರಾಮಾಯಣಗಳ ಪರಂಪರೆಗನುಗುಣವಾಗಿ. 20ನೆಯ ಶತಮಾನದ ಮರುಕಥನ ಪ್ರಯತ್ನಗಳನ್ನೇ ನೋಡಿ. ರಾಮಕಥಾ ವಸ್ತುವನ್ನೇ ಮರುಕಥಿಸಿದ ಮೂರು ಮಹಾಕಾವ್ಯಗಳು ಕಳೆದ ಶತಮಾನದಲ್ಲಿ ಸೃಷ್ಟಿಯಾಗಿವೆ. ಇವುಗಳಲ್ಲಿ ಮುಖ್ಯವಾದುದು ಕುವೆಂಪು ಅವರ ಶ್ರೀರಾಮಾಯಣ ದರ್ಶನಂ. 1948ರಲ್ಲಿ ಪ್ರಕಟವಾದ ಈ ಕೃತಿ ರಾಮಾಯಣದ ಮೇಲಿನ ಪ್ರಪ್ರಥಮ ಆಧುನಿಕ ವ್ಯಾಖ್ಯಾನ. ಕುವೆಂಪು ಅವರ ಬಳಿಕದ ಮಹತ್ವದ ರಾಮಾಯಣ ಮಹಾಕಾವ್ಯವೆಂದರೆ ವೀರಪ್ಪ ಮೊಲಿಯವರ ಶ್ರೀರಾಮಾಯಣ ಮಹಾನ್ವೇಷಣಂ.

ಯಾವುದೇ ದೃಷ್ಟಿಯಿಂದ ನೋಡಿದರೂ ಮೊಯ್ಲಿ ಯವರ ಈ ಕೃತಿ ಬೆರಗುಗೊಳಿಸುವಷ್ಟು ಬೃಹತ್‌ ಸ್ವರೂಪದ್ದು. 10 ವರ್ಷಗಳಷ್ಟು ದೀರ್ಘ‌ ಕಾಲದ ಅಧ್ಯಯನ ಹಾಗೂ ಸಂಶೋಧನೆಯ ಫ‌ಲಶ್ರುತಿ, ಈ ಕೃತಿ. ಇದರ ಗಾತ್ರ ಹಾಗೂ ಕೃತಿ ರಚನೆಯ ಸುದೀರ್ಘ‌ ಪರಿಶ್ರಮವೂ ಗಮನಾರ್ಹ. ಇಡೀ ಮಹಾಕಾವ್ಯ ಐದು ಸಂಪುಟಗಳಲ್ಲಿದೆ; ಸುಮಾರು 43 ಸಾವಿರ ಸಾಲುಗಳನ್ನು ಒಳಗೊಂಡಿದೆ.

ಈ ಮಹಾಕಾವ್ಯದ ಶೀರ್ಷಿಕೆಯನ್ನು ಗಮನಿಸಿದರೆ ಕವಿಯ ಉದ್ದೇಶ ಅರ್ಥವಾಗುತ್ತದೆ. ಅನ್ವೇಷಣ ಅಥವಾ ಪರೀಕ್ಷಣವೇ ಕವಿಯ ಮುಖ್ಯ ಉದ್ದೇಶ. ರಾಮಾಯಣದ ಕಥೆಯನ್ನು ಬಗೆಯುವುದು, ಜಾತ್ಯತೀತ ಹಾಗೂ ಆಧುನಿಕ ದೃಷ್ಟಿಕೋನದಿಂದ "ಆದರ್ಶ ರಾಜ್ಯ'ದ ನೈಜ ತಣ್ತೀ ಸಿದ್ಧಾಂತಗಳೇನೆಂಬುದನ್ನು ಅನ್ವೇಷಿಸುವುದು ಕವಿಯ ಪ್ರಧಾನ ಆಶಯ.

ರಾಮಾಯಣದಂಥ ಅಭಿಜಾತ ಕೃತಿಯೊಂದನ್ನು ಸಮೀಕ್ಷಿಸುವ, ವಿಶ್ಲೇಷಿಸುವ ಹಾಗೂ ಅದನ್ನು ಪುನರಭಿವ್ಯಕ್ತಿಸುವ ಪ್ರಕ್ರಿಯೆಯಲ್ಲಿ ಹಲವಾರು ವಿಧಾನಗಳಿವೆ. ಒಂದು - ರಾಮಾಯಣದ ಕಥೆಯನ್ನು ನಿರ್ವಹಿಸುವಾಗ ಬಳಸಿಕೊಳ್ಳಲಾಗಿರುವ ಕೆಲ "ಕೇಂದ್ರಬಿಂದು'ಗಳನ್ನು ಯಾವ ವಿಧಾನದಿಂದ ಬಗೆಯಲಾಗಿದೆ ಎಂಬುದನ್ನು ಪರಿಶೀಲಿಸುವುದು; ಎರಡು - ಕೆಲ ಮುಖ್ಯ ಪಾತ್ರಗಳನ್ನು ಹೊಸದಾಗಿ ವ್ಯಾಖ್ಯಾನಿಸುವುದು; ಮೂರು - ಕೃತಿಯಲ್ಲಿ ಹುದುಗಿಸಲಾಗುವ ಹೊಸ ಆಶಯ ಹಾಗೂ ದರ್ಶನ ಇವುಗಳ ಮೇಲೆ ಗಮನವಿರಿಸುವುದು. ಈಗ ಇಂಥ ಕೆಲವು ಅಂಶಗಳನ್ನು ಪರಿಶೀಲಿಸೋಣ.

ಅಹಲ್ಯೆಯ ಆಖ್ಯಾನ

ಮೂಲ ವಾಲ್ಮೀಕಿ ರಾಮಾಯಣದಲ್ಲಿ ಗೌತಮ ಋಷಿಯ ಪತ್ನಿಯಾದ ಅಹಲೆ ಇಂದ್ರನಿಂದ ವಂಚಿಸಲ್ಪಟ್ಟು ಪತಿಯ ಶಾಪದಿಂದ ಶಿಲೆಯಾಗಿ ಮಾರ್ಪಡುತ್ತಾಳೆ. ಮುಂದೆ ರಾಮನು ಬಂದು ಆ ಶಿಲೆಯ ಮೇಲೆ ಕಾಲಿಡುವವರೆಗೂ ಅದೇ ಅವಸ್ಥೆಯಲ್ಲಿರುತ್ತಾಳೆ. ರಾಮನ ಪದಸ್ಪರ್ಶದಿಂದ ಆಕೆ ಮತ್ತೆ ಜೀವತಳೆಯುತ್ತಾಳೆ. ಅಹಲ್ಯೆಯ ಅವಸ್ಥೆ ಆಕೆಗೆ ದೊರೆತ ಶಿಕ್ಷೆ ಇಂದಿನ ಕಾಲದ ನಮಗೆ ತುಂಬಾ ಒರಟು ಅನಿಸುತ್ತದೆ. ಮೊಲಿಯವರ ಮಹಾನ್ವೇಷಣಂನಲ್ಲಿ ಅಹಲೆಯ ಚಿತ್ರಣ ಮೂಲಕ್ಕಿಂತ ಭಿನ್ನವಾಗಿದೆ. ಬಾಲ್ಯದಿಂದಲೇ ಆಕೆ ಇಂದ್ರನ ಬಗ್ಗೆ ಮೋಹಭಾವ ತಳೆದವಳು; ಹಾಗಾಗಿಯೇ ಇಂದ್ರ, ಗೌತಮನ ವೇಷದಲ್ಲಿ ತನ್ನನ್ನು ಸಮೀಪಿಸಿದಾಗ ತನ್ನ ಪ್ರೇಮದ ಉತ್ಕಟತೆಯನ್ನು ತಾಳಿಕೊಳ್ಳಲಾರದವಳಾಗಿ ತನ್ನನ್ನು ಆತನಿಗೆ ಒಪ್ಪಿಸಿಕೊಂಡು ಬಿಡುತ್ತಾಳೆ. ಮುಂದೆ ತನ್ನ ಈ ಕೃತ್ಯಕ್ಕೆ ಪಶ್ಚಾತ್ತಾಪಪಟ್ಟು ತಾನೇ ಮನೆಬಿಟ್ಟು ತಪಸ್ಸಿಗೆಂದು ತೆರಳುತ್ತಾಳೆ. ರಾಮನ ಭೇಟಿಯಾದಾಗ ಆಕೆ ನಿಶ್ಶಕ್ತ ದೇಹದ, ನೈಜ ತಪಸ್ವಿನಿಯಾಗಿ ಮಾರ್ಪಟ್ಟಿರುತ್ತಾಳೆ. ಬಳಿಕ ರಾಮನ ಸಮಕ್ಷಮದಲ್ಲಿ ಗೌತಮ-ಅಹಲ್ಯೆ ಒಂದಾಗುತ್ತಾರೆ.

ಶೂರ್ಪನಖಾ ಪ್ರಸಂಗ
ವಾಲ್ಮೀಕಿಯ ಕಾವ್ಯದಲ್ಲಿ ಬರುವ ಶೂರ್ಪನಖಾ ಪ್ರಸಂಗವೂ ಅಷ್ಟೆ. ಅವಳನ್ನು ಅಣ್ಣ-ತಮ್ಮ ಸೇರಿ ವಿರೂಪಗೊಳಿಸಿದರೆಂಬ ಚಿತ್ರಣ ಇಂದಿನ ನಮಗೆ ಬರ್ಬರ ಕೃತ್ಯವಾಗಿ ಕಾಣಿಸುತ್ತದೆ. ಮೂಗು, ಕಿವಿ ಕತ್ತರಿಸುವಷ್ಟು ಕ್ರೌರ್ಯವನ್ನು ಅವರು ತೋರಬೇಕಿರಲಿಲ್ಲ. ಮೊಯ್ಲಿ ಅವರು ಈ ಸಂಕೀರ್ಣ ಸನ್ನಿವೇಶವನ್ನು ಚಾಕಚಕ್ಯತೆಯಿಂದ ನಿರ್ವಹಿಸಿದ್ದಾರೆ. ಅವರ ರಾಮಾಯಣದಲ್ಲಿನ ಶೂರ್ಪನಖೆ ಯುದ್ಧಕೋರ ಜನಾಂಗಕ್ಕೆ ಸೇರಿದವಳಾದ ಒಬ್ಬ ಅಸಂಸ್ಕೃತ ಹೆಣ್ಣು . ಅವಳಿಗೆ ಪಾಪ -ಪುಣ್ಯಗಳಲ್ಲಿ ನಂಬಿಕೆಯಿಲ್ಲ. ಈ ಕ್ಷಣದ ಸುಖವೇ ಮುಖ್ಯ ಎನ್ನುವವಳು ಅವಳು. ನೈತಿಕತೆಗೆ ಸಂಬಂಧಿಸಿದ ಪ್ರಶ್ನೆಗಳಿಂದ ಆಕೆ ತುಂಬಾ ದೂರದಲ್ಲಿದ್ದಾಳೆ. ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಮೊಯ್ಲಿಯವರ ನಿರೂಪಣೆಯಲ್ಲಿ ಶೂರ್ಪಣಖೆಯನ್ನು ವಿರೂಪಗೊಳಿಸಲಾಗಿರುವ ಘಟನೆ ಕೇವಲ "ಆಕಸ್ಮಿಕ'. ರಾಮ ತನ್ನನ್ನು ಮದುವೆ ಮಾಡಿಕೊಳ್ಳಲಿ ಎಂಬ ಇರಾದೆಯಿಂದ ಆಕೆ ಸೀತೆಯನ್ನು ಕಾಡತೊಡಗುತ್ತಾಳೆ. ಅವಳ ಹಿಂಸಾ ಕಿರುಕುಳವನ್ನು ಕಂಡ ಲಕ್ಷ್ಮಣ ಒರೆಯಿಂದ ಖಡ್ಗವನ್ನೆಳೆದು ಮುನ್ನುಗ್ಗಿದಾಗ ಉಂಟಾದ ಉದ್ವೇಗದ ಹೊಡೆದಾಟದಲ್ಲಿ ಅಕಸ್ಮಾತ್ತಾಗಿ ಶೂರ್ಪಣಖೆಯ ಮೂಗು ಹಾಗೂ ಕಿವಿಗಳಿಗೆ ಗಾಯಗಳಾಗುತ್ತವೆ.

ಸೀತೆಯ ಅಗ್ನಿಪರೀಕ್ಷೆ
ವಾಲ್ಮೀಕಿಯ ಈ ಪ್ರಸಂಗ ಕೂಡ ಹೊಸ ಕಾಲದ ನಮ್ಮಲ್ಲಿ ಮುಜುಗರ ಹುಟ್ಟಿಸುವಂಥದೇ. ಕಾರಣ, ವಾಲ್ಮೀಕಿಯ ರಾಮ ವಂಶಪಾರಂಪರ್ಯದ ಪ್ರತಿನಿಧಿ. ಅವನ ಜಗತ್ತು ಮಹಿಳೆಯರು ದ್ವಿತೀಯ ಸ್ಥಾನಿಗಳೆಂಬ ದೃಷ್ಟಿಕೋನದ, ಪುರುಷ ಕೇಂದ್ರಿತ ಜಗತ್ತು. ತಾನು ಯುದ್ಧ ಮಾಡಿದ್ದು ಸೀತೆಗಾಗಿ ಅಲ್ಲ , ತನ್ನ ವಂಶದ ಗೌರವವನ್ನು ಎತ್ತಿಹಿಡಿಯಲಿಕ್ಕಾಗಿ ಎಂದು ಆತ ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ ಕೂಡ! ಇಷ್ಟೆಲ್ಲ ಆದಮೇಲೆ "ಆಕೆ ಎಲ್ಲಿಗೆ ಹೋಗಬೇಕೆನಿಸುತ್ತದೆಯೋ ಅಲ್ಲಿಗೆ ಹೋಗಲಿ' ಎನ್ನುವ ಮೂಲಕ ತಾನು ಎಂಥವನೆಂಬುದನ್ನು ಋಜುಪಡಿಸುತ್ತಾನೆ!

ಮೊಲಿಯವರ ಕಾವ್ಯ ಸೀತಾ ಪರೀಕ್ಷಣ ಪ್ರಸಂಗವನ್ನು ಭಿನ್ನ ರೀತಿಯಲ್ಲಿ ನಿರೂಪಿಸಿದೆ. ಸಮರದ ಬಳಿಕ ರಾಮ ಲಂಕೆಯಲ್ಲಿ ಸಾಮಾನ್ಯ ಜನಜೀವನವನ್ನು ಪುನಸ್ಥಾಪಿಸುವ ಕಾರ್ಯದಲ್ಲಿ ಎಷ್ಟೊಂದು ವ್ಯಸ್ತನಾಗಿಬಿಡುತ್ತಾನೆಂದರೆ, ಸೀತೆಯನ್ನು ಕಾಣುವುದಕ್ಕೆ ಸಮಯವೇ ಸಿಗುವುದಿಲ್ಲ. ಸೀತೆ ಅವನಿಗಾಗಿ ಕಾದು ಕಾದು ಸಾಕಾಗಿ, ಅಗ್ನಿಪ್ರವೇಶವೇ ಇನ್ನುಳಿದ ಮಾರ್ಗವೆಂಬ ನಿರ್ಧಾರಕ್ಕೆ ಬರುತ್ತಾಳೆ. ಇದು ಸ್ವಪ್ರೇರಿತ ನಿರ್ಧಾರ. ಹಾಗೆ ಅಗ್ನಿಪ್ರವೇಶಕ್ಕೆ ಮುಂದಾದಾಗ, ಅಲ್ಲಿಗೆ ಆಕಸ್ಮಿಕವೆಂಬಂತೆ ಬರುವ ಮಂಡೋದರಿ ಆಕೆಯನ್ನು ತಡೆಯುತ್ತಾಳೆ. ರಾವಣನ ಪತ್ನಿಯಾಗಿ ಎಲ್ಲ ತೆರನ ಅನುಭವಗಳಿಂದ ಹಣ್ಣಾಗಿರುವ ಮಂಡೋದರಿ ಸೀತೆಯನ್ನು ಸಂತೈಸುವ ಈ ಮಾತುಗಳು ಮನೋಜ್ಞವಾಗಿವೆ- "ಏನು ಮಾಡುತ್ತಿದ್ದಿ ಮಗಳೆ? ಅಗ್ನಿಪ್ರವೇಶ ಮಾಡಿರುವುದಲ್ಲದೆ ನನ್ನನ್ನೂ ಬೆಂಕಿಗೆಳೆದಿದ್ದೀಯ ನೀನು. ಹೆಂಗಸರಾದ ನಮ್ಮ ಪಾಡು ಇದೇ ಅಲ್ಲವೆ- ಬದುಕಿನುದ್ದಕ್ಕೂ ಅಗ್ನಿಪರೀಕ್ಷೆಗೊಳಗಾಗುವುದು? ಇಷ್ಟು ಸಾಲದೆ ನಮಗೆ? ಇಂಥ ವಿಷಮ ಪರೀಕ್ಷೆಗಳಿಗೆ ಮುಕ್ತಾಯ ಸಾರುವ ಮಹಾನುಭಾವ ಈ ಜಗತ್ತಿಗೆಸಹಸ್ರಮಾನಕ್ಕೊಮ್ಮೆ ಮಾತ್ರ ಬಂದಾನು! (5:220: 25-30ನೆಯ ಸಾಲುಗಳು). ಪುರುಷ ಪ್ರಧಾನ ಸಮಾಜದಲ್ಲಿನ ಹೆಣ್ಣು ಮಕ್ಕಳು ಅನುಭವಿಸುವ ಪಾಡನ್ನು , "ಮಹಿಳಾ ದೃಷ್ಟಿಕೋನ'ದ ಬಗ್ಗೆ ಕವಿಗಿರುವ ಗೌರವಭಾವವನ್ನು ಈ ಸಾಲುಗಳು ಬಹು ಚೆನ್ನಾಗಿ ಧ್ವನಿಸುತ್ತವೆ.

ಮಹಾನ್ವೇಷಣಂನಲ್ಲಿ ಪಾತ್ರಚಿತ್ರಣ ವೈಶಿಷ್ಟ

ಪಿತೃಪ್ರಧಾನ ವ್ಯವಸ್ಥೆಯಲ್ಲಿ ಕುಟುಂಬದ ಹಿರಿಯ ಪುತ್ರನಿಗೇ ಅಧಿಕೃತ ಸ್ಥಾನ-ಮಾನ. ಉಳಿದ ಸದಸ್ಯರೆಲ್ಲರೂ ಅಕ್ಷರಶಃ ಅವನ ಛಾಯೆಗಳಂತಿರುತ್ತಾರೆ. ವಾಲ್ಮೀಕಿ ರಾಮಾಯಣದಲ್ಲಿ ರಾಮನೇ ಕಾವ್ಯನಾಯಕ; ಲಕ್ಷ್ಮಣ ಕೇವಲ ರಾಮನ ನೆರಳು. ಆದರೆ ಮೈಥಿಲೀಶರಣ ಗುಪ್ತ ಅವರ "ಸಾಕೇತ'ದಂಥ ಆಧುನಿಕ ರಾಮಾಯಣಗಳಲ್ಲಿ ಲಕ್ಷ್ಮಣನನ್ನೇ ರಾಮಾಯಣದ ನಾಯಕನೆಂದು ನಿರೂಪಿಸಲಾಗಿದೆ. ಮೊಲಿಯವರೂ ಇದೇ ಕ್ರಮವನ್ನು ಅನುಸರಿಸಿದ್ದಾರೆ. ಅವರ ಕಾವ್ಯದ ಕೆಲವು ಅತ್ಯಂತ ಕಾವ್ಯಮಯ ಹಾಗೂ ಮನೋಜ್ಞ ಸನ್ನಿವೇಶಗಳೆಂದರೆ ಲಕ್ಷ್ಮಣ ಹಾಗೂ ಊರ್ಮಿಳೆಯರ ನಡುವಿನ ಗಾಢಪ್ರೀತಿ ಹಾಗೂ ಅವರ ಅಗಲಿಕೆಯ ನೋವನ್ನು ನಿರೂಪಿಸುವ ಭಾಗಗಳು. ಲಕ್ಷ್ಮಣನು ರಾಮಸೀತೆಯರೊಂದಿಗೆ ಹೊರಟುಹೋದಾಗ ಊರ್ಮಿಳೆ ಅರಮನೆಯನ್ನು ತ್ಯಜಿಸಿ ಸರಯುವಿನ ದಡದಲ್ಲೊಂದು ಕುಟೀರವನ್ನು ನಿರ್ಮಿಸಿಕೊಂಡು ಜಪತಪ ಪ್ರಾರ್ಥನೆಗಳಲ್ಲಿ ದಿನಗಳೆಯುತ್ತಾಳೆ. 14 ವರ್ಷಗಳ ಬಳಿಕ ಲಕ್ಷ್ಮಣ ಮರಳಿ ಬಂದಾಗ ಅವನ ತೋಳಲ್ಲಿ ಕುಸಿದುಬಿದ್ದಾಗ ಆತ ಅವಳಲ್ಲಿ ಕಳಂಕರಹಿತ ಚಂದ್ರಕಳೆಯನ್ನು , ಮಲಿನತೆ ಸೋಕದ ಹೂವಿನ ಮೇಲಿನ ಇಬ್ಬನಿಯನ್ನು , ಅಲಂಕಾರರಹಿತ ಸೌಂದರ್ಯದಿಂದ ತೊಳಗುವ ಸ್ತ್ರೀಮೂರ್ತಿಯನ್ನು ಕಾಣುತ್ತಿರುವುದಾಗಿ ಉದ್ಗರಿಸುತ್ತಾನೆ (5:223: 71-28). ಬಹುತೇಕ ಎಲ್ಲ ಮೌಖೀಕ ರಾಮಾಯಣಗಳಲ್ಲಿ (ಭಿಲ್‌ಸಮುದಾಯದ "ರಾಮ್‌ಸೀತಾಮಣಿ ವಾರ್ತಾ', ಕುಕ್ನಾ ರಾಮಾಯಣಂ, ಗೊಂಡ ರಾಮಾಯಣ ಇತ್ಯಾದಿಗಳಲ್ಲಿ) ಲಕ್ಷ್ಮಣನೇ ಕಾವ್ಯನಾಯಕನೆನ್ನುವುದು ಕುತೂಹಲಕಾರಿಯಾಗಿದೆ. ರಾವಣನ ವಧೆಯೂ ಈತನಿಂದಲೇ. ಅಥವಾ ವಧೆಗೆ ಮುಖ್ಯ ನೆರವು ಈತನಿಂದಲೇ. ರಾಜಸ್ಥಾನದ ಮೌಖೀಕ ಮಹಾಕಾವ್ಯ "ಪಬುಜೀ'ಯಂತೂ ಲಕ್ಷ್ಮಣನನ್ನು ಮರುಧರೆಯ ಮಹರ್ಷಿಯೆಂದೇ ಸಂಬೋಧಿಸುತ್ತದೆ.

ಮೊಯ್ಲಿ ಯವರ ಮಹಾಕಾವ್ಯದಲ್ಲಿ (ಜೈನ ಮಹಾಕಾವ್ಯ ಪರಂಪರೆಗನುಗುಣವಾಗಿ) ರಾವಣ ಒಬ್ಬ ಖಳಪಾತ್ರವಲ್ಲ, ಮಹಾ ದುರಂತ ಪಾತ್ರವೂ ಅಲ್ಲ. ಸೀತೆಯಲ್ಲಿ ಕೊಂಚ ಕಾಲ ಆಸಕ್ತಿ ಬೆಳೆಸಿಕೊಂಡಿದ್ದ ಆತ ಅಂಥ ಮೋಹದ ಕಾರಣದಿಂದ ಆಕೆಯನ್ನು ಅಪಹರಿಸುತ್ತಾನೆ. ಆದರೆ ಮುಂದೆ ಪತ್ನಿ ಮಂಡೋದರಿ ಹಾಗೂ ಸೋದರರ ಮಾತಿಗೆ ಕಿವಿಗೊಟ್ಟು ಮನಃಪರಿವರ್ತನೆ ಹೊಂದಿ, ಯುದ್ಧ ಮುಗಿದ ಬಳಿಕ ಆಕೆಯನ್ನು ಗೌರವಯುತವಾಗಿ ಹಸ್ತಾಂತರಿಸಲು ನಿರ್ಧರಿಸುತ್ತಾನೆ. ಆದರೆ ದುರದೃಷ್ಟವಶಾತ್‌ ಯುದ್ಧದಲ್ಲಿ ಆತನೇ ಮರಣ ಹೊಂದುತ್ತಾನೆ.

ರಾಜಕೀಯ ಸಿದ್ಧಾಂತಗಳು, ಸಾಮಾಜಿಕ ಚಿಂತನೆಗಳು ಬದಲಾಗಿ ರುವ ಇಂದಿನ ಸಂಕೀರ್ಣ ಜೀವನಘಟ್ಟದಲ್ಲಿ ಪ್ರಾಚೀನ ಕಾವ್ಯವೊಂದನ್ನು ಮರು ನಿರೂಪಿಸುವ ಕಾರ್ಯ ನಡೆದಾಗ ನಾವು ಪರಿಶೀಲಿಸಬೇಕಾದ ಪ್ರಮುಖ ಅಂಶವೆಂದರೆ ಅದು ಹೊಸಕಾಲದ ಓದುಗನ ಪಾಲಿಗೆ ಎಷ್ಟು ಪ್ರಸ್ತುತ ಎನ್ನುವುದು. ಈ ದೃಷ್ಟಿಯಿಂದ ಮೊಯ್ಲಿ ಯವರ ಈ ಮಹಾಕಾವ್ಯ ಈ ಯುಗದ ಕೃತಿ. ಇದು ಜಾತ್ಯತೀತ ಧೋರಣೆಯ, ಬಹುವರ್ಣೀಯ ವ್ಯವಸ್ಥೆಯ, ಸಮಾನತಾವಾದದಲ್ಲಿ ನಂಬಿಕೆಯಿಟ್ಟಿರುವ ಆಧುನಿಕ ಭಾರತದ ಮೌಲ್ಯಗಳನ್ನು ಎತ್ತಿಹಿಡಿಯುತ್ತದೆ. ಎರಡು ಸಾವಿರ ವರ್ಷಗಳ ಹಿಂದಿನ ಕಥೆಯೊಂದರಲ್ಲಿ ಸಮಕಾಲೀನ ಜ್ವಲಂತ ಸಮಸ್ಯೆಗಳನ್ನು ನಿರೂಪಿಸುವ ವಿಧಾನ ಅತ್ಯಂತ ರೋಚಕವಾಗಿದೆ. ಉದಾಹರಣೆಗೆ, ದಂಡಕಾರಣ್ಯದಲ್ಲಿ ರಾಮನ ವಾಸ್ತವ್ಯ ವ್ಯವಸ್ಥೆಯ ನಿರೂಪಣೆಯ ವೇಳೆ ಕಾರ್ಮಿಕರ ಬಳಕೆಯ ಚಿತ್ರಣ. ದೇವತೆಗಳ ರಾಜ ಇಂದ್ರ ಹಾಗೂ ರಾಕ್ಷಸರ ದೊರೆ ರಾವಣನಿಂದ ಗಣಿ ಕೆಲಸಗಾರರು ಶೋಷಣೆಗೊಳಗಾಗಿರುವರೆಂದು ತಿಳಿದುಬಂದಾಗ ರಾಮನು ಬಡ ಹಾಗೂ ಶ್ರಮಿಕ ವರ್ಗಕ್ಕೆ ತನ್ನ ಮುಂದಿನ ದಿನಗಳು ಮುಡಿಪಾಗಿವೆ ಎಂದು ಪ್ರತಿಜ್ಞೆ ಮಾಡುತ್ತಾನೆ. ಹೀಗೆಯೇ ಮದ್ಯವ್ಯಸನಿ ಪತಿಯಿಂದ ಹೊಡೆತ ತಿಂದ ಪತ್ನಿಯನ್ನು ಕಂಡ ಸೀತೆ ತೀವ್ರ ಕೋಪಕ್ಕೊಳಗಾಗಿ ರಾಜ್ಯಾದ್ಯಂತ ಪಾನನಿಷೇಧ ಜಾರಿಗೊಳಿಸುವಂತೆ ರಾಮನನ್ನು ಆಗ್ರಹಿಸುತ್ತಾಳೆ. ಸುಗ್ರೀವ ಕಿಷ್ಕಿಂಧೆಯ ದೊರೆಯಾದಾಗ ತನ್ನ ರಾಜ್ಯವನ್ನು ಆಧುನೀಕರಣಗೊಳಿಸಲು ನಿರ್ಧರಿಸುತ್ತಾನೆ. ಅವನ ಮಹತ್ತಾÌಕಾಂಕ್ಷೆಯ ಆಡಳಿತನೀತಿಗಳಲ್ಲೊಂದು - ನೂತನ ಶಿಕ್ಷಣ ನೀತಿ.

ಕಾವ್ಯದರ್ಶನ
ಎಲ್ಲಕ್ಕಿಂತ ಮುಖ್ಯವಾಗಿ ಮೊಯ್ಲಿ ಯವರ ಮಹಾಕಾವ್ಯ ಭವಿಷ್ಯದಲ್ಲಿ ಭಾರತ ಹೇಗಿರಬೇಕೆಂಬ ಉನ್ನತ ದರ್ಶನವನ್ನು ಗರ್ಭೀಕರಿಸಿಕೊಂಡಿದೆ. ರಾಮಾಯಣದಿಂದ ಆಧುನಿಕ ಭಾರತ ಕಲಿಯಬೇಕಾದುದು ಇದನ್ನೇ - ಬಹುಧ್ವನಿಗಳ, ಬಹು ಸಂಸ್ಕೃತಿಗಳ, ಬಹುಜನದ ರಾಷ್ಟ್ರವೊಂದರ ನಿರ್ಮಾಣ ಹೇಗೆ ಎಂಬುದನ್ನು.

ಈ ಮಹಾಕಾವ್ಯದಲ್ಲೊಂದೆಡೆ ರಾಮ ಹೀಗೆ ಘೋಷಿಸುತ್ತಾನೆ - "ಏಕಸಂಸ್ಕೃತಿಯ ಸಿದ್ಧಾಂತ ನಮ್ಮನ್ನು ಕರಾಳಕತ್ತಲೆಯ ರೂಪಕ್ಕೆ ತಳ್ಳಿàತು!' ತನ್ನ ಪಟ್ಟಾಭಿಷೇಕದ ಸಂದರ್ಭದಲ್ಲಿ ಅವನು ಆಡುವ ಮಾತುಗಳಲ್ಲಿ ರಾಮರಾಜ್ಯ ಕುರಿತ ಮುಂಗಾಣೆRಯಿದೆ; "ಜಾತಿ-ಪಂಥಗಳ ಭೇದವಿಲ್ಲದೆ ಪ್ರತಿಯೊಬ್ಬನಿಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿಕೆಯೇ ತನ್ನ ಗುರಿ; ತನ್ನ ಆಡಳಿತದಲ್ಲಿ ಯಾವುದೇ ತೆರನ ಪಕ್ಷಪಾತವೂ ಇರುವುದಿಲ್ಲ, ಪೂರ್ವಾಗ್ರಹವೂ ಇರಲಾರದು' ಇದು ಆತನ ಕನಸು. ಮಹಣ್ತೀದ ಸಾಹಿತ್ಯ ಕೃತಿಯೊಂದರಲ್ಲಿ ಸ್ಥಳೀಯ ಕಾಲ-ದೇಶಗಳು ವಿಶ್ವಾತ್ಮಕ ಆಯಾಮವನ್ನು ಪಡೆದುಕೊಳ್ಳುವುದನ್ನು ಅನುಭವಕ್ಕೆ ತಂದುಕೊಳ್ಳಬಹುದು.ಮೊಯ್ಲಿ ಯವರ ಮಹಾಕಾವ್ಯ ಇಂಥದು.

~ ಸಿ. ಎನ್‌. ರಾಮಚಂದ್ರನ್‌

 

 


Share