ಜೋಪಡಿ ದುರಸ್ತಿಗೆ ಸಹಕಾರ, ಜಿ.ಪಂ. ಸಿಇಒ ಜೊತೆ ಚರ್ಚೆ - ನರಸಿಂಹ ದೇವಾಡಿಗ ಮನೆಗೆ ಭೇಟಿ ಬಳಿಕ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಭರವಸೆ

 

ಪಡುಕೋಣೆ : ಕಳೆದ ಹಲವು ವರ್ಷಗಳಿಂದ ಜೋಪಡಿ ಮನೆಯಲ್ಲೇ ವಾಸವಿರುವ ಪಡುಕೋಣೆ ನರಸಿಂಹ ದೇವಾಡಿಗರ ಮನೆಗೆ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಸೋಮವಾರ ಭೇಟಿ ನೀಡಿದರು.

ಈ ವೇಳೆ ಮಾತನಾಡಿದ ಅವರು, ನರಸಿಂಹ ದೇವಾಡಿಗರು ನಿರ್ಮಿಸಿಕೊಂಡ ಶೌಚಗೃಹಕ್ಕೆ ಗ್ರಾ.ಪಂ. ಹಣ ಬಿಡುಗಡೆ ಮಾಡದಿರುವ ವಿಚಾರ ಗಮನಕ್ಕೆ ಬಂದಿದ್ದು, ಯಾವ ಕಾರಣಕ್ಕೆ ಹಣ ತಡೆಹಿಡಿಯಲಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ನಾಡಾ ಗ್ರಾಂ.ಪಂ. ಅಭಿವೃದ್ಧಿ ಅಧಿಕಾರಿ ಜೊತೆ ಹಣ ತಡೆದಿಡಿದ ಬಗ್ಗೆ ಮಾಹಿತಿ ಪಡೆಯುವ ಜೊತೆಗೆ ಉಡುಪಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೊತೆ ಮಾತನಾಡಿ, ಫಲಾನುಭವಿಗಳಿಗೆ ತಕ್ಷಣ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಲಾಗುತ್ತದೆ ಎಂದರು.

ನರಸಿಂಹ ದೇವಾಡಿಗ ಮನೆ ವೀಕ್ಷಿಸಿದ ಅವರು ಮನೆ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ತಾತ್ಕಾಲಿಕ ದುರಸ್ಥಿಯನ್ನಾದರೂ ಮಾಡುವ ಜರೂರತ್ತಿದೆ. ಮನೆ ಜಾಗದ ವಿಷಯ ನ್ಯಾಯಾಲಯದಲ್ಲಿ ಇರುವುದರಿಂದ ನ್ಯಾಯಾಲಯಕ್ಕೆ ಅಫಿದಾವತ್ ಸಲ್ಲಿಸಿ ದುರಸ್ತಿ ಮಾಡಲು ಅವಕಾಶವಿದೆ. ದಾನಿಗಳ ಸಹಕಾರದಲ್ಲಿ ಮನೆ ದುರಸ್ತಿಗೆ ಪ್ರಯತ್ನಿಸಲಾಗುತ್ತದೆ ಎಂದರು.

ಕುಂದಾಪುರ ದೇವಾಡಿಗ ಸಮಾಜ ಸೇವಾ ಸಂಘ ನಿಯೋಜಿತ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಮಾತನಾಡಿ, ನರಸಿಂಹ ದೇವಾಡಿಗ ಮನೆ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದು, ತುರ್ತು ದುರಸ್ಥಿಗೆ ಸಂಘ ಸಹಕರಿಸಲಿದೆ. ನ್ಯಾಯಾಲಯದಲ್ಲಿ ಅಫಿದಾವತ್ ಸಲ್ಲಿಸಿ, ಒಪ್ಪಿಗೆ ಸಿಕ್ಕ ನಂತರ ಮುಂದಿನ ಹೆಜ್ಜೆ ಇಡಲಾಗುತ್ತದೆ. ಹವ್ಯಾಸಿ ಫೋಟೋಗ್ರಾಫರ್ ಸುಮನಾ ಪಡುಕೋಣೆ ಅವರಿಗೆ ದಾನಿಯೊಬ್ಬರು ಕ್ಯಾಮರ ಕೊಡುಗೆ ನೀಡಲು ಮುಂದೆ ಬಂದಿದ್ದು, ಸದ್ಯದಲ್ಲೇ ಕ್ಯಾಮರಾ ಹಸ್ತಾಂತರಿಸಲಾಗುತ್ತದೆ ಎಂದರು.

ವಿಜಯವಾಣಿ ಸೆ.೪ರಂದು ಇವರಿಗೆ ಜೋಪಡಿಯೇ ಅರಮನೆ ಎಂಬ ತಲೆಬರಹದಲ್ಲಿ ಸುದ್ದಿ ಪ್ರಕಟಿಸಿತ್ತು.

ತಾ.ಪಂ. ಉಪಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಕಡ್ಕೆ, ಕುಂದಾಪುರ ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಂದ್ರ ಪೂಜಾರಿ, ಪತ್ರಕರ್ತ ಟಿ.ಪಿ. ಮಂಜುನಾಥ, ಹಾಗೂ ಸ್ಥಳೀಯರು ಇದ್ದರು.

 


Share