ಕುಂದಾಪುರ ತಾಲ್ಲೂಕಿನ ದೇವಾಡಿಗ ಸಮಾಜದ 67 ಮಂದಿ ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಡಾ.ಎಂ.ವೀರಪ್ಪ ಮೊಯಿಲಿಯವರಿಂದ ಅಭಿನಂದನೆ - ಸನ್ಮಾನ

ಕುಂದಾಪುರ: ಪ್ರಜ್ಞಾವಂತ ನಾಗರೀಕರು ಇರುವವರೆಗೆ ಪ್ರಜಾಪ್ರಭುತ್ವ ಉಳಿಯುತ್ತದೆ. ಪ್ರತಿಯೊಬ್ಬರ ಅಂತರ್ಯದಲ್ಲಿ ಹುದುಗಿರುವ ವಿಶೇಷವಾದ ಶಕ್ತಿಯನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕು. ಮನಸ್ಸು ಹಾಗೂ ಗುಣಗಳಲ್ಲಿ ಶ್ರೀಮಂತಿಕೆ ಬೆಳೆಸಿಕೊಳ್ಳುವುದರಿಂದ ಸಮಾಜದ ಅಭಿವೃದ್ದಿ ಶೃಮಿಸಲು ಸಾಧ್ಯ. ಸಾರ್ವಜನಿಕ ಜೀವನದಲ್ಲಿ ಹಣ ಮಾಡುವುದು ಹಾಗೂ ಬಂಧುತ್ವವನ್ನು ಬೆಳೆಸುವುದು ಗುರಿಯಾಗಬಾರದು. ಅಧಿಕಾರ ಬರುವುದು ಸೇವೆ ಮಾಡಲಿಕ್ಕಾಗಿ ಎನ್ನುವ ಮನೋಭೂಮಿಕೆ ಬೆಳೆಸಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯಿಲಿ ಹೇಳಿದರು.

ಕುಂದಾಪುರ ಬೋರ್ಡ್ ಹೈಸ್ಕೂಲಿನ ರೋಟರಿ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ಭಾನುವಾರ ದೇವಾಡಿಗರ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ನಡೆದ ಗ್ರಾಮ ಪಂಚಾಯಿತಿ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಂವಿಂಧಾನದ 73 ಹಾಗೂ 74 ನೇ ತಿದ್ದುಪಡಿ ಮಾಡುವ ಮೂಲಕ ತ್ರಿಸ್ತರ ಪಂಚಾಯತ್ ವ್ಯವಸ್ಥೆಗಳಿಗೆ ಸ್ಥಳೀಯಾಡಳಿತಕ್ಕೆ ಅವಕಾಶ ನೀಡಿ ಸ್ವಾಯತ್ತತೆ ನೀಡಬೇಕು ಎನ್ನುವ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಕನಸು ಕರ್ನಾಟಕದಲ್ಲಿ ನನಸಾಗಿದೆ. ಕಡ್ಡಾಯವಾಗಿ ಮೀಸಲಾತಿ ನೀಡಬೇಕು ಎನ್ನುವ ಆದೇಶವನ್ನು ಜಾರಿಗೊಳಿಸಿರುವುದು ಹಾಗೂ ಸಮಾನ ಶಿಕ್ಷಣ ಅವಕಾಶಕ್ಕಾಗಿ ಸಿ‌ಇಟಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿದ ಹೆಗ್ಗಳಿಕೆಯೂ ತಾನು ಮುಖ್ಯಮಂತ್ರಿಯಾಗಿರುವ ಅವಧಿಯ ಸರ್ಕಾರದ್ದಾಗಿದೆ. ಚಿನ್ನಪ್ಪ ರೆಡ್ಡಿ ಆಯೋಗದ ಮೂಲಕ ಹಿಂದುಳಿದ ವರ್ಗದವರಿಗೆ ನ್ಯಾಯ ದೊರಕಿಸುವ ಕಾರ್ಯ ನಡೆದಿದೆ.

ಕ್ರಾಂತಿಕಾರಿ ಬದಲಾವಣೆಗಳು ಸರ್ವಾಧಿಕಾರದಿಂದ ಆಗುವುದಿಲ್ಲ, ಈ ಬದಲಾವಣೆಗಳು ಕೇವಲ ಪ್ರಜಾಸತ್ತಾತ್ಮಕ ಹೋರಾಟಗಳಿಂದ ಮಾತ್ರ ಸಾಧ್ಯವಾಗುತ್ತದೆ. ಕೋಮವಾದಿಗಳ ಕಬಂಧ ಬಾಹುವಿನಿಂದ ಶೋಷಿತರ ಹಾಗೂ ದುರ್ಬಲರನ್ನು ಹೊರ ತರುವ ಪ್ರಯತ್ನ ಮಾಡಬೇಕು. ನಿರಂತರ ಶೋಷಣೆಯಿಂದಾಗಿ, ಶೋಷಿತ ವರ್ಗ ಶೋಷಣೆಯ ವಿರುದ್ದ ಪ್ರತಿಭಟಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ. ರಾಜಕೀಯ ಕ್ಷೇತ್ರವೂ ಒಂದು ರೀತಿಯ ಕಬಂಧ ಬಾಹುವಿನಂತೆಯೇ, ಇದರ ಒಳಗೆ ಇದ್ದು ಹೋರಾಟ ಮಾಡುವ ರಾಜಕೀಯ ಇಚ್ಚಾ ಶಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಅವರು ನುಡಿದರು.

ಕುಂದಾಪುರ ದೇವಾಡಿಗರ ಸಮಾಜ ಸೇವಾ ಸಂಘದ ಅಧ್ಯಕ್ಷ ನಾರಾಯಣ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಮುಂಬಯಿಯ ದೇವಾಡಿಗ ವೆಲ್‌ಫೇರ್ ಅಸೋಸೀಯೇಶನ್ ಗೌರವಾಧ್ಯಕ್ಷ ಸುರೇಶ್ ಡಿ ಪಡುಕೋಣೆ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದರು.

ಮಾಜಿ ಶಾಸಕ ಗೋಪಾಲ ಭಂಡಾರಿ, ರಾಜ್ಯ ದೇವಾಡಿಗ ಸಂಘದ ಅಧ್ಯಕ್ಷ ವಾಮನ ಮರೋಳಿ, ರಾಜ್ಯ ಅರಣ್ಯ ಇಲಾಖೆ ನೌಕರರ ಮಹಾಮಂಡಲದ ಅಧ್ಯಕ್ಷ ಆಲೂರು ರಘುರಾಮ ದೇವಾಡಿಗ, ಮುಂಬೈ ದೇವಾಡಿಗ ಸಂಘದ ಮಾಜಿ ಅಧ್ಯಕ್ಷ ಎಚ್.ಮೋಹನ್‌ದಾಸ್, ಬಾರ್ಕೂರು ಶ್ರೀ ಏಕನಾಥೇಶ್ವರಿ ದೇವಸ್ಥಾನದ ಆಡಳಿತ ಟ್ರಸ್ಟಿ ಅಣ್ಣಯ್ಯ ಸೇರಿಗಾರ, ಮುಂಬೈ ದೇವಾಡಿಗರ ಸಂಘದ ಉಪಾಧ್ಯಕ್ಷ ರವಿ ಎಸ್ ದೇವಾಡಿಗ, ದುಬೈಯ ಕುಂದಾಪುರ ದೇವಾಡಿಗ ಮಿತ್ರ ಸಂಘಟನೆಯ ಶೀನ ದೇವಾಡಿಗ, ದುಬೈ ಕನ್ನಡ ಸಂಘದ ಮಾಜಿ ಅಧ್ಯಕ್ಷ ಬಿ.ಜಿ ಮೋಹನ್‌ದಾಸ್, ಉಡುಪಿ ಜಿಲ್ಲಾ ಪಂಚಾಯಿತಿ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಗೌರಿ ದೇವಾಡಿಗ, ತಾ.ಪಂ ಸದಸ್ಯರುಗಳಾದ ಶಾರದಾ ದೇವಾಡಿಗ, ಗೌರಿ ದೇವಾಡಿಗ, ಮುಂಬಯಿಯ ಉದ್ಯಮಿ ನಾಗರಾಜ್ ಡಿ ಪಡುಕೋಣೆ, ಕುಂದಾಪುರ ದೇವಾಡಿಗ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಚಂದ್ರಶೇಖರ ದೇವಾಡಿಗ ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ಗೌರಿ ಶಿವಾನಂದ ಅತಿಥಿಗಳಾಗಿದ್ದರು.

ಇದೆ ಸಂದರ್ಭದಲ್ಲಿ ಸರಸ್ವತಿ ಸಂಮಾನ ಪ್ರಶಸ್ತಿ ಪಡೆದ ಡಾ.ಎಂ.ವೀರಪ್ಪ ಮೊಯಿಲಿಯವರನ್ನು, ಕುಂದಾಪುರ ತಾಲ್ಲೂಕಿನ ದೇವಾಡಿಗ ಸಮಾಜದ 67 ಮಂದಿ ಗ್ರಾಮ ಪಂಚಾಯಿತಿ ಸದಸ್ಯರುಗಳನ್ನ, ರಾಜ್ಯ ಅರಣ್ಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ರಘುರಾಮ ದೇವಾಡಿಗ ಹಾಗೂ ಉಪ್ಪುಂದ ದೇವಾಡಿಗರ ಸಂಘದ ಅಧ್ಯಕ್ಷ ಜನಾರ್ಧನ್ ದೇವಾಡಿಗ ಅವರನ್ನು ಗೌರವಿಸಲಾಯಿತು.

ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ರಾಜು ದೇವಾಡಿಗ ಪ್ರಾಸ್ತಾವಿಕ ಮಾತುಗಳನ್ನು ಹೇಳಿದರು, ನಾರಾಯಣ ದೇವಾಡಿಗ ಸ್ವಾಗತಿಸಿದರು. ಪತ್ರಕರ್ತ ರಾಜೇಶ್ ಕೆ.ಸಿ ಹಾಗೂ ಶಿಕ್ಷಕ ರಾಮ ದೇವಾಡಿಗ ನಿರೂಪಿಸಿದರು, ಕಾರ್ಯದರ್ಶಿ ಉದಯ್ ಹೇರಿಕೆರೆ ವಂದಿಸಿದರು.

(ಚಿತ್ರ- ಯೋಗೀಶ್ ಕುಂಭಾಸಿ )

 


Share