ಅಕ್ಷತಾ ದೇವಾಡಿಗ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ವಿನಯ್ ಕುಮಾರ್ ಸೊರಕೆರವರಿಂದ ವಿತರಣೆ | ಅಕ್ಷತಾ ದೇವಾಡಿಗ ಮೆಮೋರಿಯಲ್ ಎಡು ಫಂಡ್ ಗೆ ವಾಮನ್ ಮರೋಳಿಯವರಿಂದ ರೂ.25 ಸಾವಿರ

ಬೈಂದೂರು: ಅಕ್ಷತಾ ಪ್ರಕರಣ ಅನೀರಿಕ್ಷಿಯ ಘಟನೆಯಾಗಿದ್ದು, ಆಕೆಯ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸವಾಗಬೇಕಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನೆಲೆಯಲ್ಲಿ ರಸ್ತೆ ದುರಸ್ತಿ ಹಾಗೂ ಬಸ್ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಹಾಗೂ ಉಸ್ತುವಾರಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದರು.

ಇಲ್ಲಿನ ಸರ್ಕಾರಿ ಪಪೂ ಕಾಲೇಜಿನ ಆವರಣದಲ್ಲಿ ನಡೆದ ಅಕ್ಷತಾ ದೇವಾಡಿಗಳ ಶೃದ್ಧಾಂಜಲಿ ಕಾರ್ಯಕ್ರಮದಲ್ಲಿ ಆಕೆಯ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಪರಿಹಾರ ವಿತರಿಸಿ ಅವರು ಮಾತನಾಡಿದರು. ಅಕ್ಷತಾ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು, ಆಕೆಯ ಸಾವಿನಿಂದ ಕುಟುಂಬ ಕಂಗೆಟ್ಟಿದೆ. ಮುಂದೆ ಗ್ರಾಮೀಣ ಭಾಗದಲ್ಲಿ ಇಂತಹ ಪ್ರಕರಣ ಮರುಕಳಿಸದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಾಗುವುದು ಎಂದರು.

ಶಿಕ್ಷಕರ ಕಲ್ಯಾಣನಿಧಿಯಿಂದ ರೂ.50 ಸಾವಿರದ ಚೆಕ್‌ನ್ನು ಅಕ್ಷತಾಳ ಹೆತ್ತವರಿಗೆ ಹಸ್ತಾಂತರಿಸಿ ಮಾತನಾಡಿದ ಶಾಸಕ ಕೆ. ಗೋಪಾಲ ಪೂಜಾರಿ, ಅಕ್ಷತಾಳ ಬಾಳಿನಲ್ಲಿ ನಡೆದ ಅಮಾನುಷ ಕೃತ್ಯದಿಂದಾಗಿ ಸಮಾಜವೇ ತಲೆತಗ್ಗಿಸುವ ಹಾಗಾಗಿದೆ. ಈ ಪರಿಹಾರದ ಚೆಕ್‌ನ್ನು ಆಕೆಯ ಮನೆಯಲ್ಲಿ ಕೊಡಬಹುದಿತ್ತು. ಆದರೆ ಅವಳ ಸಾವಿಗೆ ನ್ಯಾಯ ದೊರಕಿಸಿಕೊಡುವ ನೆಲೆಯಲ್ಲಿ ಈ ಕಾಲೇಜಿನ ವಿದ್ಯಾರ್ಥಿಗಳು ಸಾಕಷ್ಟು ಹೋರಾಟ ಮಾಡುವುದರ ಮೂಲಕ ತಮ್ಮ ನೋವನ್ನು ಪ್ರಕಟಿಸಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಧೈರ್ಯ ತುಂಬುವ ನೆಲೆಯಲ್ಲಿ ವಿದ್ಯಾರ್ಥಿಗಳ ಸಮ್ಮುಖದಲ್ಲಿ ವಿತರಿಸಲಾಗಿದೆ. ಅಕ್ಷತಾ ಕುಟುಂಬಕ್ಕೆ ನ್ಯಾಯ ಒದಗಿಸುವ ನೆಲೆಯಲ್ಲಿ ಸರ್ಕಾರ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5 ಲಕ್ಷ ರೂ. ಚೆಕ್ ನೀಡಲಾಗಿದ್ದು, ಇದು ಅಕ್ಷತಾಳ ಜೀವದ ಬೆಲೆಯಲ್ಲ. ಆಕೆ ಇಂದು ಇರುತ್ತಿದ್ದರೆ ಮುಂದೆ ಉನ್ನತ ಶಿಕ್ಷಣ ಪಡೆದು ಉತ್ತಮ ಸ್ಥಾನಕ್ಕೇರುತ್ತಿದ್ದಳು. ಪ್ರತಿಭಾವಂತಳಾದ ಅಕ್ಷತಾಗೆ ಇಂತಹ ಸಾವು ಬರಬಾರದಿತ್ತು ಎಂದು ಒಂದು ಕ್ಷಣ ಭಾವುಕರಾಗಿ ಕಣ್ಣೀರಿಟ್ಟರು. ಕಾರ್ಯಕ್ರಮದ ಮೊದಲಿಗೆ ಅಕ್ಷತಾ ಆತ್ಮಕ್ಕೆ ಶಾಂತಿಕೋರಿ ಎರಡು ನಿಮಿಷಗಳ ಮೌನಪ್ರಾರ್ಥನೆ ಮಾಡಲಾಯಿತು.

ತಹಶೀಲ್ದಾರ್ ಗಾಯತ್ರಿ ನಾಯಕ್, ವಿಶೇಷ ತಹಶೀಲ್ದಾರ್ ಕಿರಣ್ ಗೌರಯ್ಯ, ಜಿಪಂ ಶಿಕ್ಷಣ ಮತ್ತು ಆರೋಗ್ಯಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ, ತಾಪಂ ಸದಸ್ಯ ಎಸ್.ರಾಜು ಪ್ರಜಾರಿ, ಯಡ್ತರೆ ಗ್ರಾಪಂ ಅಧ್ಯಕ್ಷ ಎನ್. ನಾಗರಾಜ ಶೆಟ್ಟಿ, ಉಪಾಧ್ಯಕ್ಷೆ ಕಲಾವತಿ ನಾಗರಾಜ ಗಾಣಿಗ, ಬೈಂದೂರು ದೇವಾಡಿಗ ಒಕ್ಕೂಟದ ಅಧ್ಯಕ್ಷ ಕೆ.ಜಿ.ಸುಬ್ಬ ದೇವಾಡಿಗ, ಪ್ರಾಂಶುಪಾಲ ಟಿ. ಪಾಲಾಕ್ಷ ಉಪಸ್ಥಿತರಿದ್ದರು.

ಅಕ್ಷತಾ ದೇವಾಡಿಗ ಮೆಮೋರಿಯಲ್ ಎಡು ಫಂಡ್ ಗೆ ವಾಮನ್ ಮರೋಳಿಯವರಿಂದ ರೂ.25 ಸಾವಿರದ ಚೆಕ್‌.

ಈ ಸಂದರ್ಭದಲ್ಲಿ ಮಂಗಳೂರು ದೇವಾಡಿಗ ಸಂಘದ ಅಧ್ಯಕ್ಷ ವಾಮನ ಮರೋಳಿ ವೈಯಕ್ತಿಕವಾಗಿ ಅಕ್ಷತಾ ಕುಟುಂಬಕ್ಕೆ ರೂ.25 ಸಾವಿರದ ಚೆಕ್‌ನ್ನು ನೀಡಿದರು. ಸಂಘದ ಕಾರ್ಯದರ್ಶಿ ಎಂ ದೇವರಾಜ್, ಸದಸ್ಯ ಎಂ.ಎಚ್. ಕರುಣಾಕರ್ ಹಾಗೂ ದೇವಾಡಿಗ.ಕಾಮ್ ನ ಬಿ.ಜಿ.ಮೋಹನ್‌ದಾಸ್ ಜೊತೆಯಲ್ಲಿದ್ದರು.

 


Share