ಮರೆಯಾದ ವಾದನ ವಿಶಾರದ ಸೆಕ್ಸೋಫೋನ್ ಮಾಂತ್ರಿಕ ಓಬು ಶೇರಿಗಾರ

ನಾದಸ್ವರ ವಿದ್ವಾನ ಹಾಗೂ ಸೆಕ್ಸೋಫೋನ್ ವಾದಕ ಯು. ಓಬು ಶೇರಿಗಾರರು ಇದೇ ತಿಂಗಳ ದಿನಾಂಕ ೨೧ ರಂದು ಶನಿವಾರ ರಾತ್ರಿ ೧೨.೪೫ ಗಂಟೆಗೆ ಅಲ್ಪಕಾಲದ ಅಸೌಖ್ಯದಿಂದ ಪತ್ನಿ ಗುಲಾಬಿ, ಮಗಳು ಮಾಲತಿ, ಅಳಿಯ ಭಾಸ್ಕರ ಮೊಮ್ಮಕ್ಕಳಾದ ಅಕ್ಷತಾ,ನಿಖಿತಾ,ರಕ್ಷಿತಾ ಹಾಗೂ ಅಪಾರ ಅಭಿಮಾನಿ ಬಳಗಕ್ಕೆ ವಿದಾಯ ಹೇಳುತ್ತ ಇಹಲೋಕದ ಯಾತ್ರೆ ಮುಗಿಸಿದ್ದಾರೆ.

ಅವರಿಗೆ ೮೩ ವರ್ಷ ವಯಸ್ಸಾಗಿತ್ತು. ದಿ.ಅಣ್ಣು ಶೇರಿಗಾರ ಹಾಗೂ ದಿ.ಗೌರಿಯವರ ೮ ಮಕ್ಕಳಲ್ಲಿ (೪ ಹೆಣ್ಣು+೪ ಗಂಡು) ಕಿರಿಯ ಮಗ ಓಬು ಶೇರಿಗಾರ ಅಕ್ಕ ಸರಸ್ವತಿ ಹಿಂದಿನ ರಾತ್ರಿ ಅಂದರೆ ಶುಕ್ರವಾರ ದಿನಾಂಕ ೨೦ ರಂದು ತೀರಿಕೊಂಡದ್ದು ದುರಂತದ ಸರಮಾಲೆಯಲ್ಲೊಂದು. ಮುಂದಿನ ತಿಂಗಳು ಅವರ ಮೊಮ್ಮಗಳು ಹಾಗೂ ಅವರ ಶಿಷ್ಯೆ ಸೆಕ್ಸೋಫೋನ್ ವಾದಕಿ ಕುಮಾರಿ ಅಕ್ಷತಾಳ ವಿವಾಹ ನೋಡಬೇಕೆಂಬ ಅವರ ಹಂಬಲ ಈಡೇರಲಿಲ್ಲವೆಂಬ ಒಂದು ಕೊರಗು ಅವರ ಕುಟುಂಬಸ್ಥರನ್ನು ಬಾಧಿಸುತ್ತಿದೆ.

ಆಗಿನ ಕಾಲದಲ್ಲಿಯೇ ಏಳನೆಯ ತರಗತಿಯ ವರೆಗೆ ಓದಿದ ಹೆಗ್ಗಳಿಕೆ ಅವರದಾದರೂ, ಸಂಗೀತದಲ್ಲಿಯ ವಿಶೇಷ ಒಲವು ಅವರನ್ನು ಮುಂದಕ್ಕೆ ಓದಲು ಕೊಡದೆ, ನಾದಸ್ವರ ಕಲಿಕೆಯ ಕಡೆಗೆ ಸೆಳೆದುಕೊಂಡು ಹೋಯಿತು. ಉಡುಪಿಯ ಅನಂತ ಶೇರಿಗಾರ, ನರಸಿಂಹ ಶೇರಿಗಾರ ಹಾಗೂ ಪುತ್ತೂರಿನ ಡೋಗ್ರ ಶೇರಿಗಾರರ ಶಿಷ್ಯರಾಗಿ ತಮ್ಮನ್ನು ಉತ್ತುಂಗಕ್ಕೆ ಏರಿಸಿಕೊಂಡರು. ಮುಂದೆ ೭೫ ಕ್ಕೂ ಮಿಕ್ಕ ಶಿಷ್ಯರನ್ನು ಸೆಕ್ಸೋಫೋನ್ ವಾದಕರನ್ನಾಗಿ ತರಬೇತುಗೊಳಿಸಿದ ಕೀರ್ತಿ ಶ್ರೀ ಓಬು ಶೇರಿಗಾರರಿಗೆ ಸಲ್ಲುತ್ತದೆ.

ಅವರ ಸಾಧನೆಯ ಸಂಕ್ಷಿಪ್ತ ವಿವರ ಹೀಗಿದೆ

• ತಮಿಳುನಾಡಿನ ತಿರುವಾಯೂರ ತ್ಯಾಗರಾಜೋತ್ಸವದಲ್ಲಿ ಭಾಗವಹಿಸಿದ ಹೆಗ್ಗಳಿಕೆ ಇವರದು.

• ತಮ್ಮ ಶಿಷ್ಯರೊಂದಿಗೆ ಮುಂಬೈ, ಕೇರಳ, ಮದ್ರಾಸ್, ವಿಶಾಖಪಟ್ಟಣಮ್, ಕೊಯಮತ್ತೂರುಗಳಲ್ಲಿ ವಿಶೇಷ ವಾದ್ಯಗೋಷ್ಠಿ ನಡೆಸಿಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ.

• ಮಂಗಳೂರು ಆಕಾಶವಾಣಿಯ ಕಲಾವಿದರಾಗಿ ಅನೇಕ ಬಾರಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.

• ದೂರದರ್ಶನದ ಚಂದನವಾಹಿನಿಯೂ ಇವರ ಕಾರ್ಯಕ್ರಮವನ್ನು ಪ್ರಸಾರ ಮಾಡಿದೆ.

ಅವರಿಗೆ ಸಂದ ಪ್ರಶಸ್ತಿ ಹಾಗೂ ಸನ್ಮಾನಗಳು:

• ೧೯೮೨ ರಲ್ಲಿ ರೋಟರಿ ಕ್ಲಬ್, ಬೈಂದೂರಿನಿಂದ.

• ೧೯೮೬ ರಲ್ಲಿ ಪೆರ್ಡೂರು ಯುವಕ ಮಂಡಲದಿಂದ.

• ೧೯೮೭ ರಲ್ಲಿ ಕರ್ನಾಟಕ ರಾಜ್ಯ ದೇವಾಡಿಗ ಸುಧಾರಕ ಸಂಘ, ಮಂಗಳೂರಿನ ವಜ್ರಮಹೋತ್ಸವದ ಸಂದರ್ಭದಲ್ಲಿ.

• ೧೯೯೧ ರಲ್ಲಿ ದೇವಾಡಿಗ ಸೇವಾ ಸಂಘ, ಉಡುಪಿಯ ಸಮಾಜ ಭವನದ ಉದ್ಘಾಟನಾ ಸಮಾರಂಭದಲ್ಲಿ.

• ೧೯೯೫ ರಲ್ಲಿ ಶ್ರೀ ಕ್ರಿಷ್ಣ ಸನ್ನಿಧಿಯಲ್ಲಿ ನವಗ್ರಹ ಉದ್ಘಾಟನಾ ಸಮಾರಂಭದಲ್ಲಿ ಶೀರೂರು ಮಠಾಧೀಶರಿಂದ ಸಮ್ಮಾನ.

• ೧೯೯೬ ರಲ್ಲಿ ಶಿರೂರು ಪರ್ಯಾಯ ಮಹೋತ್ಸವದಲ್ಲಿ ಸಮ್ಮಾನ

• ೧೯೯೯ ರಲ್ಲಿ ದೇವಾಡಿಗ ಸುಧಾರಕ ಸಂಘ, ಬೆಂಗಳೂರಿನಲ್ಲಿ

• ೧೯೯೯ ರಲ್ಲಿ ಪ್ರೊಗ್ರೆಸ್ಸಿವ್ ವಾಣಿಜ್ಯ ಶಿಕ್ಷಣ ಸಂಸ್ಥೆ, ಉಡುಪಿಯಲ್ಲಿ ಕೆ. ಕೆ. ಪೈಯವರಿಂದ

• ೨೦೦೦ ದಲ್ಲಿ ಕಾಣಿಯೂರು ಮಠಾಧೀಶರಿಂದ ಶ್ರೀ ಕ್ರಿಷ್ಣಾನುಗ್ರಹ ಪ್ರಶಸ್ತಿ.

• ೨೦೦೧ ರಲ್ಲಿ ವಾದನ ವಿಶಾರದ ಬಿರುದಿನೊಂದಿಗೆ ಶ್ರೀ ಕ್ರಿಷ್ಣಾನುಗ್ರಹ ಪ್ರಶಸ್ತಿ, ಪೇಜಾವರ ಮಠಾಧೀಶರಿಂದ

• ೨೦೦೧ ರಲ್ಲಿ ಮುಖ್ಯಪ್ರಾಣ ಆಂಜನೇಯ ಮಠ, ವಿಶಾಖಾಪಟ್ಟಣಮ್ ನಲ್ಲಿ ಸನ್ಮಾನ.

• ೨೦೦೧ ರಲ್ಲಿ ತ್ಯಾಗರಾಜ-ಪುರಂದರ ಮಹೋತ್ಸವ ಪ್ರಶಸ್ತಿ.

• ೨೦೦೨ ರಲ್ಲಿ ವಾದ್ಯ ಕಲಾವಿದರ ಹಿತರಕ್ಷಣಾ ವೇದಿಕೆಯಿಂದ ಪ್ರಶಸ್ತಿ-ಪತ್ರ.

• ೨೦೦೫ ರಲ್ಲಿ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥರಿಂದ ಶ್ರೀ ಕ್ರಿಷ್ಣ ಜಯಂತಿ ಪುರಸ್ಕಾರ.

• ೨೦೦೬ ರಲ್ಲಿ ಪುತ್ತೂರಿನಲ್ಲಿ ದಿ. ವೆಂಕಟಪ್ಪ ಡೋಗ್ರ ಸಂಸ್ಮರಣ ಪುರಸ್ಕಾರ

• ೨೦೦೬ ರಲ್ಲಿ ರೋಟರಿ ಕ್ಲಬ್ ಉಡುಪಿಯಿಂದ ಸಮ್ಮಾನ.

• ೨೦೦೭ ರಲ್ಲಿ ಕರ್ನಾಟಕ ರಾಜ್ಯ ಸವಿತಾ ಕಲಾ ಸಂಘ, ಬೆಂಗಳೂರು, ಇವರಿಂದ ಕಲಾನಿಧಿ ಪ್ರಶಸ್ತಿ.

• ೨೦೧೦ ರಲ್ಲಿ ರಥಬೀದಿ ಉಡುಪಿಯಲ್ಲಿ ಸಾರ್ವಜನಿಕ ಸನ್ಮಾನ

• ೨೦೧೧ ರಲ್ಲಿ ಪೇಜಾವರ ಸ್ವಾಮೀಜೀಯವರಿಂದ ಶ್ರೀರಾಮ-ವಿಠಲ ಪ್ರಶಸ್ತಿ.

ಉಡುಪಿಯ ಕೃಷ್ಣ ಮಠದಲ್ಲಿ 50ವರ್ಷಗಳಿಗೂ ಅಧಿಕ ಕಾಲ ಆಸ್ಥಾನ ಕಲಾವಿದರಾಗಿ ತಮ್ಮ ಅಮೂಲ್ಯ ಸೇವೆ ಸಲ್ಲಿಸಿ ಅಷ್ಟ‌ಮಠಾಧೀಶರುಗಳ ಪ್ರಶಂಸೆಗೆ ಪಾತ್ರರಾಗಿದ್ದ ಓಬು ಸೇರಿಗಾರ್ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನ ಸೇರಿದಂತೆ ಸ್ಥಳೀಯ ಆಸುಪಾಸಿನ ಅನೇಕ ದೇವಸ್ಥಾನಗಳಲ್ಲೂ ತಮ್ಮ‌ಕಲಾಸೇವೆ ಸಲ್ಲಿಸಿದ್ದರು.

ಉಡುಪಿಯ ಕೃಷ್ಣ ಮಠದಲ್ಲಿ 50ವರ್ಷಗಳಿಗೂ ಅಧಿಕ ಕಾಲ ಆಸ್ಥಾನ ಕಲಾವಿದರಾಗಿ ತಮ್ಮ ಅಮೂಲ್ಯ ಸೇವೆ ಸಲ್ಲಿಸಿ ಅಷ್ಟ‌ಮಠಾಧೀಶರುಗಳ ಪ್ರಶಂಸೆಗೆ ಪಾತ್ರರಾಗಿದ್ದ ಓಬು ಸೇರಿಗಾರ್ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನ ಸೇರಿದಂತೆ ಸ್ಥಳೀಯ ಆಸುಪಾಸಿನ ಅನೇಕ ದೇವಸ್ಥಾನಗಳಲ್ಲೂ ತಮ್ಮ‌ಕಲಾಸೇವೆ ಸಲ್ಲಿಸಿದ್ದರು.ಕಾಂಚನ ವೆಂಕಟಸುಬ್ರಹ್ಮಣ್ಯ ಅಯ್ಯರ್ ಅವರಲ್ಲಿ ಶಾಸ್ತ್ರೀಯ ಸಂಗೀತ ಶಿಕ್ಷಣ ಪಡೆದ ಓಬು ಸೇರಿಗಾರ್ ,ತಮ್ಮ ಶುದ್ಧ , ಸಂಪ್ರದಾಯ ಬದ್ಧ ನಾಗಸ್ವರ ಸ್ಯಾಕ್ಸೋಫೋನ್ ವಾದನದಿಂದ ಪ್ರಸಿದ್ಧರಾಗಿದ್ದರು.

ಕಲಾಸೇವೆಯ ಜೊತೆಗೆ ಸುಮಾರು 160ಕ್ಕಿಂತಲೂ ಅಧಿಕ ಶಿಷ್ಯರಿಗೆ ವಾದ್ಯವಿದ್ಯೆಯನ್ನು ಶ್ರದ್ಧೆಯಿಂದ ಧಾರೆಯೆರೆದು ಕರಾವಳಿ ಜಿಲ್ಲೆಗಳಲ್ಲಿ ವಾದ್ಯ ಸಂಗೀತ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ಸಲ್ಲಿಸಿದ್ದರು.ತಮ್ಮ ಕಲಾಸೇವೆಗಾಗಿ ಉಡುಪಿಯಅಷ್ಟಮಠಾಧೀಶರು ವಿಶೇಷ ಗೌರವಕ್ಕೆ ಪಾತ್ರರಾಗಿದ್ದ ಅವರನ್ನು ಸಂಸ್ಕಾರ ಭಾರತಿ ಉಡುಪಿ, ಕಲಾವೃಂದ (ರಿ), ರಾಗಧನ (ರಿ)ಸೇರಿದಂತೆ ಅನೇಕ ಸಂಘಸಂಸ್ಥೆಗಳು ಸಂಮಾನಿಸಿದ್ದರು.ಉಡುಪಿಯಲ್ಲಿ ಸಾರ್ವಜನಿಕರು ಮತ್ತು ಅವರ ಶಿಷ್ಯರು 2008ರಲ್ಲಿ ಉಡುಪಿ ರಥಬೀದಿಯಲ್ಲಿ ವೈಭವದಿಂದ ಅಭಿನಂದಿಸಿ ಗೌರವಿಸಿದ್ದರು.ಮೃತರರು ಪತ್ನಿ ,ಪುತ್ರಿ ಮತ್ತು ಅಪಾರ ಶಿಷ್ಯವೃಂದವನ್ನು ಅಗಲಿದ್ದಾರೆ.

ಸಂತಾಪ :

ಓಬು ಸೇರಿಗಾರ ನಿಧನಕ್ಕೆ ಪೇಜಾವರ ಶ್ರೀ ವಿಶ್ವೇಶತೀರ್ಥರು ,ಶ್ರೀ ವಿಶ್ವಪ್ರಸನ್ನ ತೀರ್ಥರು, ಕೃಷ್ಣಾಪುರ ಅದಮಾರು ,ಫಲಿಮಾರು , ಪುತ್ತಿಗೆ ಶೀರೂರು ,ಕಾಣಿಯೂರು ,ಸೋದೆ ಶ್ರೀಗಳು ಸಂತಾಪ  ವ್ಯಕ್ತಪಡಿಸಿದ್ದಾರ. ಸಂಸ್ಕಾರ ಭಾರತಿ , ಯಕ್ಷಗಾನ ಕಲಾರಂಗ ,ರಾಗಧನ ಉಡುಪಿಯ ದೇವಾಡಿಗರ ಸಮಾಜ ಸೇವಾ ಸಂಘ ಸಂತಾಪ ವ್ಯಕ್ತಪಡಿಸಿವೆ ..ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ,ಮಾಜಿ ಶಾಸಕ ಕೆ ರಘುಪತಿ ಭಟ್ ಶೋಕ ವ್ತಕ್ತಪಡಿಸಿದ್ದಾರೆ.

~ ( ಡಾ.ಮಾಧವಿ ಎಸ್. ಭಂಡಾರಿ )


Share