ಮಂಜರಿ ಎಂಬ ಮಯೂರಿ.....

ಕಲೆ ಎಲ್ಲರನ್ನೂ ಕೈ ಬೀಸಿ ಕರೆಯುತ್ತದೆ. ಆದರೆ ಕೆಲವರನ್ನು ಮಾತ್ರ ಆರಿಸಿಕೊಳ್ಳುತ್ತದೆ ಎಂಬ ಮಾತಿದೆ. ಹಾಗೆ ಆರಿಸಲ್ಪಟ್ಟವರು ಕಲಾರಾಧನೆಯನ್ನು ಶ್ರದ್ಧೆಯಿಂದ ಮಾಡಿದರೆ ಕಲಾ ಸರಸ್ವತಿ ಒಲಿಯುವುದರಲ್ಲಿ ಎರಡು ಮಾತಿಲ್ಲ. ಅದಕ್ಕೆ ಪ್ರಸಕ್ತ ಉದಾಹರಣೆ ಮಂಜರಿ.

 

ಉಡುಪಿಯ ಕೆ.ಎಸ್. ಚಂದ್ರಶೇಖರ್ ಹಾಗೂ ಗುಲಾಬಿ ದಂಪತಿಗಳ ಪುತ್ರಿಯಾದ ಮಂಜರಿ ಬಾಲ್ಯದಲ್ಲಿಯೇ ನೃತ್ಯದತ್ತ ವಿಶೇಷ ಆಸಕ್ತಿ ಹೊಂದಿದವರು. ಸಣ್ಣ ವಯಸ್ಸಿನಲ್ಲಿಯೇ ಕಾಲಿಗೆ ಗೆಜ್ಜೆ ಕಟ್ಟಿ ಹೆಜ್ಜೆ ಇಟ್ಟವರು. ಓದಿನಲ್ಲಿ ಮುಂದಿದ್ದರೂ ಭರತನಾಟ್ಯದಲ್ಲಿ ವಿಶೇಷ ಆಸಕ್ತಿ. ಕೂಚುಪುಡಿಯಲ್ಲಿ ಈಗಾಗಲೇ ಪಳಗಿರುವ ಮಂಜರಿ ಭರತನಾಟ್ಯದಲ್ಲಿ ವಿದ್ವತ್ ಪದವಿ ಪಡೆದಿದ್ದಾರೆ. ಉಡುಪಿಯ ನೃತ್ಯ ಗುರು ಶ್ಯಾಮಲಾ ಭಟ್, ನೃತ್ಯಕಲಾ ಸಿಂಧು ರಾಧಾಕೃಷ್ಣ ತಂತ್ರಿ, ಗುರು ರಮ್ಯಾ ಜಾನಕಿರಾಮ್ ರ ನೃತ್ಯ ಗರಡಿಯಲ್ಲಿ ಪಳಗಿರುವ ಮಂಜರಿ ಭರತನಾಟ್ಯದ ಪ್ರಕಾರಗಳಲ್ಲಿ ಒಂದಾದ ಪಂಡನಲ್ಲೂರ್ ಕಲೆಯಲ್ಲಿ ತರಬೇತಿ ಪಡೆದು ಸುಮಾರು ನೃತ್ಯಗಳಿಗೆ ಸಂಯೋಜನೆಯನ್ನು ಮಾಡಿದ್ದಾರೆ. ಬೆಂಗಳೂರು, ಮಂಗಳೂರು, ಮೈಸೂರು, ದಾವಣಗೆರೆ, ಶಿವಮೊಗ್ಗ, ಹುಬ್ಬಳ್ಳಿ, ಬಾಂಬೆ, ಗೋವಾ, ಮಂತ್ರಾಲಯ, ತಿರುಪತಿ ಸೇರಿದಂತೆ 1000ಕ್ಕೂ ಅಧಿಕ ಕಾರ್ಯಕ್ರಮ ನೀಡಿದ್ದಾರೆ..

ವನಸ್ತುತಿಯ ಸೂರ್ಯ ಮತ್ತು ಶುಕ್ರ, ದಕ್ಷಯಜ್ಞದ ಶಿವ, ದಾಸ ಲಹರಿಯ ಪುರಂದರ, ಕೂಗಿದರೂ ದನಿ ಕೇಳಲಿಲ್ಲವೇ ಯ ಕನಕದಾಸ, ಶ್ರೀನಿವಾಸ ಕಲ್ಯಾಣದ ಶ್ರೀನಿವಾಸ, ದಶಾವತಾರದ ನರಸಿಂಹ ಮತ್ತು ಕಲ್ಕಿ, ಭಸ್ಮಾಸುರ ಮೋಹಿನಿಯ ಭಸ್ಮಾಸುರ, ರಾಮಾಯಣದ ವಾಲಿಯಾಗಿ ಅಭಿನಯಿಸಿರುವುದು ಇವರ ಕಲಾ ಪ್ರತಿಭೆಗೆ ಸಾಕ್ಷಿ. ಗಣೇಶ ವಂದನ, ರಾಧಕೃಷ್ಣ ಪ್ರೇಮ ವಿಲಾಸ, ಶ್ರೀ ಚಾಮುಂಡೇಶ್ವರಿ, ಓಂ, ದಶಾವತರಂ, ಶಿವ ತಾಂಡವ ಸ್ತುತಿ, ಗೋಪಿಕಾ ವಿಲಾಸ್, ದುರ್ಗಾ ಸ್ತುತಿ, ವರ್ಣಂ ಇವರ ನೃತ್ಯ ಸಂಯೋಜನೆಗೆ ಅದ್ಬುತ ಉದಾಹರಣೆ.

2000 ಮತ್ತು 2003 ರಲ್ಲಿ ಜರ್ಮನಿಯ ಹರ್ಮನ್ ಗುಂಡರ್ಟ್ ಸೊಸೈಟಿ, 2006 ರಲ್ಲಿ ಜರ್ಮನಿಯ ಕನಕ ಪುರಂದರ ಉತ್ಸವ, ತಿರುಪತಿಯ ಬ್ರಹ್ಮೋತ್ಸವ, ಬನವಾಸಿಯ ಕನ್ನಡ ಸಾಹಿತ್ಯ ಸಮ್ಮೇಳನ, ಮೈಸೂರಿನ ಜಗನ್ಮೋಹನ ಅರಮನೆ, ಬೆಂಗಳೂರಿನ ಯುಗಳ ಫೆಸ್ಟ್, ಗೋವಾದ ಕನ್ನಡ ಸಾಹಿತ್ಯ ಸಮ್ಮೇಳನ, ಉಡುಪಿಯ ರಾಜಾಂಗಣದಲ್ಲಿ ನಡೆಯುವ ಕನಾಕಭಿಷೇಕ, ಹನುಮ ಜಯಂತಿ, ಶ್ರೀನಿವಾಸ ಕಲ್ಯಾಣ, ಕೃಷ್ಣ ಅಷ್ಟಮಿ ಹೀಗೆ ಹಲವಾರು ಕಡೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ.

 

ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗಿರುವ ಮಂಜರಿ ಲಯನ್ಸ್ ಕ್ಲಬ್, ಜರ್ಮನಿಯ ಕೋರ್ನ್ ವೆಸ್ಟರ್ನ್, ಉಡುಪಿಯ ರೋಟರಿ ಕ್ಲಬ್, ಮುಂಬೈನ ಗಾಯತ್ರಿ ಪರಿವಾರ್ ಹೀಗೆ ಹಲವು ಸಂಘ ಸಂಸ್ಥೆಗಳಿಂದ ಸನ್ಮಾನಿತರಾಗಿದ್ದಾರೆ. ಭರತ ನಾಟ್ಯದ ವಿಶೇಷ ಸಾಧನೆಗೆ ಕಾಪುವಿನ ವಿದ್ಯಾನಿಕೇತನ ಸಂಸ್ಥೆ ಕೊಡಮಾಡುವ ವಿದ್ಯಾರತ್ನ ಪ್ರಶಸ್ತಿಯನ್ನೂ ಪಡೆದಿದ್ದಾರೆ.

ಭರತನಾಟ್ಯ ಕಲಾವಿದೆಯರಾದ ತಮ್ಮ ಸ್ನೇಹಿತರೊಡಗೂಡಿ ಉಡುಪಿಯಲ್ಲಿ ಸೃಷ್ಟಿ ಕಲಾ ಕುಟೀರ ವನ್ನು ಆರಂಭಿಸಿ ಭರತನಾಟ್ಯವನ್ನು ಕಲಿಸುತ್ತಿದ್ದಾರೆ. ಜೊತೆಗೆ ಬ್ರಹ್ಮಾವರದಲ್ಲೂ ತರಗತಿ ನಡೆಸುತ್ತಿದ್ದಾರೆ. ಅವರ ಸಾಧನೆ ನಿರಂರತವಾಗಿ ಸಾಗಲಿ ಎಂದು ಹಾರೈಸೋಣ.

~ ಅನಿತಾ ಬನಾರಿ

~ ಚಿತ್ರ: ಹರೀಶ್ ಕುಮಾರ್ , 'ನೃತ್ಯಾಭಿವಂದನ' ಕಾರ್ಯಕ್ರಮ ರಾಜಾಂಗಣದಲ್ಲಿ  ೧೧ - ೦೯-೨೦೧೬


Share