ಮುಂಬಯಿ: ಭೀಕರ ಅಪಘಾತದಲ್ಲಿ ಘಾಟ್ ಕೋಪರ್ ನ ಒಂದೇ ಕುಟುಂಬದ ನಾಲ್ವರ ದಾರುಣ ಸಾವು

ಕಾರು ಮತ್ತು ಟ್ರಕ್‌ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ತುಳು-ಕನ್ನಡಿಗ ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಸಾವನ್ನಪ್ಪಿದ ಘಟನೆ ಪುಣೆ-ಬೆಂಗಳೂರು ಹೆದ್ದಾರಿ ಸಮೀಪದ ಮಂಗರಾಯಾಚಿವಾಡಿ ಕ್ರಾಸ್‌ನಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ.ಘಟನೆಯಲ್ಲಿ ದಂಪತಿ, ಮಗು ಮತ್ತು ಅವರ ಸಂಬಂಧಿ ಸಾವನ್ನಪ್ಪಿದ್ದಾರೆ. 

ಮೂಲತಃ ಬ್ರಹ್ಮಾವರದ ಮೂಲದ ಪ್ರಸ್ತುತ ಘಾಟ್‌ಕೋಪರ್‌ ನಿವಾಸಿಗಳಾದ ಸಂತೋಷ್‌ ಡೊಂಬ ದೇವಾಡಿಗ (41), ಪೂರ್ಣಿಮಾ ಸಂತೋಷ್‌ ದೇವಾಡಿಗ (35), ಅನಿಷಾ ಸಂತೋಷ್‌ ದೇವಾಡಿಗ (4), ಪುಣೆಯ ತಲೆಗಾಂವ್‌ ದಬಾಡಿ ನಿವಾಸಿ ಸುಪ್ರಿಯಾ ದತ್ತಾ ದೇವಾಡಿಗ (36) ಮೃತಪಟ್ಟವರು.

ಘಟನೆಯಲ್ಲಿ ದತ್ತಾ ದೇವಾಡಿಗ (45) ಅವರು ಗಂಭೀರವಾಗಿ ಗಾಯಗೊಂಡಿದ್ದು, ಅವರು ಕೊಲ್ಲಾಪುರ ಛತ್ರಪತಿ ಪ್ರಮೀಳಾ ರಾಜೇ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ದತ್ತಾ ವಿಟಲ್‌ ದೇವಾಡಿಗ ಅವರು ಪುಣೆಯ ಚಾಕನ್‌ನ ಕಂಪೆನಿಯೊಂದರದಲ್ಲಿ ಉದ್ಯೋಗದಲ್ಲಿದ್ದರು.

ದುರಂತಕ್ಕೀಡಾದ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಕಪಿಲ್‌ ವಿಟಲ್‌ ದೇವಾಡಿಗ, ಅವನೀಶ್‌ ದತ್ತ ದೇವಾಡಿಗ ಅವರು ಅಪಾಯದಿಂದ ಪಾರಾಗಿದ್ದಾರೆ. ಕಳೆದ ರವಿವಾರ ಬ್ರಹ್ಮಾವರದಲ್ಲಿ ಕಾರ್ಯಕ್ರಮವೊಂದಕ್ಕೆ ಆಗಮಿಸಿ ಕುಟುಂಬ ವಾಪಸಾಗುತ್ತಿತ್ತು.

ಸೋಮವಾರ ಸಂಜೆ ಬ್ರಹ್ಮಾವರದಿಂದ ಹೊರಟು ಮಂಗಳವಾರ ಬೆಳಗ್ಗೆ ಪುಣೆ ಮತ್ತು ಮುಂಬಯಿಗೆ ಆಗಮಿಸುವ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಮಂಗರಾಯಾಚಿವಾಡಿ ಕ್ರಾಸ್‌ ಬಳಿಯಲ್ಲಿ ಟ್ರಕ್‌ ಪೆಟ್ರೋಲ್‌ ಬಂಕ್‌ನಲ್ಲಿ ಇಂಧ‌ನ ತುಂಬಿಸಿಕೊಂಡು ಹೈವೆಗೆ ತಿರುಗುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಆಗಮಿಸುತ್ತಿದ್ದ ಕಾರು ಟ್ರಕ್‌ನ ಹಿಂಭಾಗಕ್ಕೆ ಢಿಕ್ಕಿ ಹೊಡೆದ ಪರಿಣಾಮ ಈ ಭೀಕರ ಅಪಘಾತ ಸಂಭವಿಸಿತು.

ಅಪಘಾತದ ರಭಸಕ್ಕೆ ಕಾರಿನ ಒಂದು ಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಮೃತ ದೇಹಗಳನ್ನು ಹೊರತೆಗೆಯಲು ಹರಸಾಹಸ ಪಡಬೇಕಾಯಿತು. ಪುಣೆಯಿಂದ ಬ್ರಹ್ಮಾವರಕ್ಕೆ ಹೊರಟ್ಟಿದ್ದಾಗ ಮನೆಯಲ್ಲಿದ್ದ ನಾಯಿಯನ್ನು ಕುಟುಂಬ ಕರೆದೊಯ್ದಿದ್ದು ಘಟನೆಯಲ್ಲಿ ನಾಯಿ ಪವಾಡ ಸದೃಶ್ಯವಾಗಿ ಪಾರಾಗಿದೆ. ಘಟನಾ ಸ್ಥಳದಲ್ಲಿ ಬದುಕುಳಿದ ಸಂಬಂಧಿಕರ ರೋದನ ಮುಗಿಲುಮುಟ್ಟುವಂತಿದ್ದರೆ, ಮೂಕಪ್ರಾಣಿ ನಾಯಿ ಕೂಡ ತನ್ನವರನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದ ದೃಶ್ಯವಂತೂ ಮನಕಲಕುವಂತಿತ್ತು.

ಮೃತದೇಹಗಳನ್ನು ಪುಣೆಯ ತಲೆಗಾಂವ್‌ ದಬಾಡಿಗೆ ಮಂಗಳವಾರ ಸಂಜೆ ತರಲಾಗಿದೆ ಎಂದು ಮೂಲಗಳು ತಿಳಿಸಿವೆ. ಘಟನೆಗೆ ದೇವಾಡಿಗ ಸಂಘ ಪುಣೆ ಅಧ್ಯಕ್ಷ ಪ್ರಭಾಕರ ದೇವಾಡಿಗ ಸಂತಾಪ ಸೂಚಿಸಿದ್ದಾರೆ.

 


Share