ಮೂಲ್ಕಿ: ಕಾರು ಹೊಂಡಕ್ಕೆ ಬಿದ್ದು ಅಪ್ಪಿ ಎ. ಶೇರಿಗಾರ್‌ (83) ನಿಧನ

 

 

ಮೂಲ್ಕಿ ಬಪ್ಪನಾಡು ನಾಗಸ್ವರ ವಿದ್ವಾನ್‌ ದಿ| ಬಪ್ಪನಾಡು ಅಣ್ಣು ಶೇರಿಗಾರ್‌ ಅವರ ಪತ್ನಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ನಾಗೇಶ್‌ ಬಪ್ಪನಾಡು ಅವರ ತಾಯಿ ಅಪ್ಪಿ ಎ. ಶೇರಿಗಾರ್‌ (83) ಮೃತಪಟ್ಟವರು.

ಶನಿವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕಾರ್ನಾಡು ರಾಷ್ಟ್ರೀಯ ಹೆದ್ದಾರಿಯ ಭಾರತ್‌ ಬೆಂಝ್ ಸರ್ವಿಸಿಂಗ್‌ ಸೆಂಟರಿನ ಸಮೀಪ  ಚಾಲಕನ ಹತೋಟಿ ತಪ್ಪಿದ ಕಾರು ರಸ್ತೆ ಬದಿಯಲ್ಲಿದ್ದ ಸುಮಾರು ಹತ್ತಡಿ ಆಳದ ಹೊಂಡಕ್ಕೆ ಬಿದ್ದು ಓರ್ವ ಮಹಿಳೆ ಮೃತ ಪಟ್ಟಿದ್ದಾರೆ. ಮೂಲ್ಕಿ ಬಪ್ಪನಾಡು ನಾಗಸ್ವರ ವಿದ್ವಾನ್‌ ದಿ| ಬಪ್ಪನಾಡು ಅಣ್ಣು ಶೇರಿಗಾರ್‌ ಅವರ ಪತ್ನಿ ಹಾಗೂ ರಾಜ್ಯೋತ್ಸವ  ಪ್ರಶಸ್ತಿ ಪುರಸ್ಕೃತ ಕಲಾವಿದ ನಾಗೇಶ್‌ ಬಪ್ಪನಾಡು ಅವರ ತಾಯಿ  ಅಪ್ಪಿ ಎ. ಶೇರಿಗಾರ್‌ (83) ಮೃತಪಟ್ಟವರು. ಅವರು ನಾಲ್ವರು ಪುತ್ರರು ಹಾಗೂ ಒಬ್ಬರು ಪುತ್ರಿಯನ್ನು ಅಗಲಿದ್ದಾರೆ.

ಮೊಮ್ಮಗನ ಜತೆಗೆ ಸುರತ್ಕಲ್‌ನ ಡಾಕ್ಟರ್‌ ಬಳಿಗೆ  ಹೋಗಿ  ವಾಪಸಾಗುತ್ತಿದ್ದಾಗ ದುರಂತ ಸಂಭವಿಸಿದೆ.  ಚಾಲಕ ಸುರೇಂದ್ರ ಹಾಗೂ ಮೊಮ್ಮಗ ತುಷಾರ್‌  ಅಪಾಯದಿಂದ ಪಾರಾಗಿದ್ದಾರೆ. ಪುತ್ರ ನಾಗೇಶ್‌  ಅವರು ತಾಯಿಯನ್ನು ಕೂಡಲೇ  ತನ್ನ ಕಾರಿನಲ್ಲಿ ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲಾಗಲಿಲ್ಲ. ಮಳೆ ಜೋರಾಗಿ ಸುರಿಯುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿದೆ. ರಸ್ತೆಯಲ್ಲಿ  ತುಂಬಿದ್ದ ನೀರು ಕಾರಿನ ಗ್ಲಾಸ್‌ನ ಮೇಲೆ ಎರಚಿದ ಪರಿಣಾಮ ಚಾಲಕನ ಹತೋಟಿ ತಪ್ಪಿದ ಕಾರು ಹೊಂಡಕ್ಕೆ ಉರುಳಿಬಿದ್ದಿದೆ. ಮಂಗಳೂರು ಉತ್ತರ ಸಂಚಾರ ಪೊಲೀಸರು  ಪ್ರಕರಣ  ದಾಖಲಿಸಿಕೊಂಡಿದ್ದಾರೆ.

ಅಪಾಯಕಾರಿ ನೀರು

 ಹೆದ್ದಾರಿಯಲ್ಲಿ ನೀರು ನಿಲ್ಲುವ ಸಮಸ್ಯೆ ಹಲವೆಡೆ ಕಂಡು ಬರುತ್ತಿದೆ. ಇದರಿಂದಾಗಿ ಈ ಹಿಂದೆಯೂ ಅಪಘಾತ ಸಂಭವಿಸಿದ  ಉದಾಹರಣೆಗಳಿವೆ. ಕೋಟ್ಯಂತರ ರೂ. ವ್ಯಯಿಸಿ ನಿರ್ಮಿಸುವ ಹೆದ್ದಾರಿಯಲ್ಲಿ ಉಂಟಾಗಿರುವ ಇಂಥ ಸಮಸ್ಯೆಗಳ ವಿರುದ್ಧ ಜನರು ಆಕ್ರೋಶ  ವ್ಯಕ್ತಪಡಿಸುತ್ತಿದ್ದಾರೆ.

~ ಉದಯವಾಣಿ


Share