ರಾಜ್ಯ ಚಲನಚಿತ್ರ ಪ್ರಶಸ್ತಿ: ಹರೀಶ್ ಶೇರಿಗಾರ್ ನಿರ್ಮಾಣದ ‘ಮಾರ್ಚ್-22’ ಚಿತ್ರಕ್ಕೆ 2ನೇ ‘ಅತ್ಯುತ್ತಮ ಚಿತ್ರ ಪ್ರಶಸ್ತಿ’

2ನೇ ‘ಅತ್ಯುತ್ತಮ ಚಿತ್ರ-‘ಅತ್ಯುತ್ತಮ ಗೀತಾ ರಚನಕಾರ’ ಎರಡು ಪ್ರಶಸ್ತಿಗಳನ್ನು ಬಾಚಿಕೊಂಡ ‘ಮಾರ್ಚ್-22’..

ಬೆಂಗಳೂರು: 2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟ ಮಾಡಲಾಗಿದ್ದು, 'ಶುದ್ಧಿ' ಸಿನಿಮಾ ಮೊದಲ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದ್ದರೆ, 'ಮಾರ್ಚ್-22' ಸಿನಿಮಾ 2ನೇ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.ಇದೇ ಸಿನೆಮಾದ ‘ಮುತ್ತು ರತ್ನದ ಪ್ಯಾಟೆ’ಎನ್ನುವ ಹಾಡನ್ನು ಬರೆದಿರುವ ಜೆ.ಎಂ.ಪ್ರಹ್ಲಾದ್ ಅವರಿಗೆ ‘ಅತ್ಯುತ್ತಮ ಗೀತಾ ರಚನಕಾರ’ಪ್ರಶಸ್ತಿ ಕೂಡ ಬಂದಿದೆ.

ACME ಮೂವೀಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಬ್ಯಾನರಿನಡಿಯಲ್ಲಿ ಮಂಗಳೂರು ಮೂಲದ ದುಬೈಯ ಖ್ಯಾತ ಉದ್ಯಮಿ ಹಾಗೂ ಹೆಸರಾಂತ ಹಿನ್ನೆಲೆ ಗಾಯಕ ಹರೀಶ್ ಶೇರಿಗಾರ್ ಹಾಗು ಅವರ ಧರ್ಮ ಪತ್ನಿ ಶರ್ಮಿಳಾ ಶೇರಿಗಾರ್ ನಿರ್ಮಾಣದಲ್ಲಿ, ಕೋಡ್ಲು ರಾಮಕೃಷ್ಣ ನಿರ್ದೇಶನದಲ್ಲಿ ಮೂಡಿಬಂದ ‘ಮಾರ್ಚ್ 22’ ಚಿತ್ರ ಕನ್ನಡ ಚಿತ್ರರಂಗದಲ್ಲಿ ಅಪಾರ ಮೆಚ್ಚುಗೆ, ಉತ್ತಮ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

ವಿಭಿನ್ನ ಕಥಾಹಂದರವನ್ನು ಇಟ್ಟುಕೊಂಡು ಹರೀಶ್ ಶೇರಿಗಾರ್ ನಿರ್ಮಿಸಿರುವ ‘ಮಾರ್ಚ್ 22’ ಚಿತ್ರ ಕರ್ನಾಟಕವಲ್ಲದೇ ಯುಎಇಯ ದುಬೈ, ಅಬುಧಾಬಿ, ಶಾರ್ಜಾದಲ್ಲಿ ಹಾಗು ಒಮಾನಿನ ಮಸ್ಕತ್ತಿನಲ್ಲಿ ಬಿಡುಗಡೆಗೊಂಡು ಕನ್ನಡ ಸಿನಿ ರಸಿಕರ ಮನಗೆದ್ದಿತ್ತು.

ಜೆ.ಎಂ.ಪ್ರಹ್ಲಾದ್ ಅವರ ‘ಮುತ್ತು ರತ್ನದ ಪ್ಯಾಟೆ’ ಎನ್ನುವ ಹಾಡಿಗೆ ’65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ’ ಪ್ರಧಾನ ಕಾರ್ಯಕ್ರಮದಲ್ಲಿ ‘ಅತ್ಯುತ್ತಮ ಗೀತಾ ರಚನಕಾರ’ ಪ್ರಶಸ್ತಿ ಬಂದಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಹಿಂದೂ-ಮುಸ್ಲಿಮರ ಮಧ್ಯೆಗಿನ ಸೌಹಾರ್ದತೆ, ಸಾಮರಸ್ಯವನ್ನು ಸಾರುವ ಕಥೆಯನ್ನು ಹೊಂದಿರುವ ‘ಮಾರ್ಚ್ 22’ ಚಿತ್ರ 10ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಆಯ್ಕೆಯಾಗುವ ಮೂಲಕ ಪ್ರದರ್ಶನ ಕಂಡು ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು.

ಚಿತ್ರದಲ್ಲಿ ಅನಂತ್ ನಾಗ್, ಗೀತಾ ಜೊತೆಗೆ ಶರತ್ ಲೋಹಿತಾಶ್ವ, ಅಶೀಷ್ ವಿದ್ಯಾರ್ಥಿ, ಸಾಧು ಕೋಕಿಲಾ, ಜೈಜಗದೀಶ್, ರವಿ ಕಾಲೇ, ವಿನಯಾ ಪ್ರಸಾದ್, ಪದ್ಮಜಾ ರಾವ್, ರಮೇಶ್ ಭಟ್, ಶ್ರೀನಿವಾಸ್ ಮೂರ್ತಿ, ರವೀಂದ್ರನಾಥ್, ಆರ್ಯವರ್ಧನ್ ಮತ್ತು ಕಿರಣ್ ರಾಜ್, ಮೇಘಶ್ರೀ, ದೀಪ್ತಿ ಶೆಟ್ಟಿ, ಕಿಶೋರ್, ಸೃಜನ್ ರೈ, ಶಾಂತಾ ಆಚಾರ್ಯ, ದುಬೈಯ ರಂಗಭೂಮಿ ಕಲಾವಿದರಾದ ಚಿದಾನಂದ ಪೂಜಾರಿ, ಸುವರ್ಣ ಸತೀಶ್, ಪ್ರಶೋಭಿತ ಮುಂತಾದವರು ನಟಿಸಿದ್ದಾರೆ.

ದುಬೈನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಹೆಸರಾಂತ ಉದ್ಯಮಿ ಹಾಗೂ ಕನ್ನಡಿಗ ಪದ್ಮಶ್ರೀ ಡಾ. ಬಿ.ಆರ್ ಶೆಟ್ಟಿ ಅವರು ಚಿತ್ರದ ‘ಮುತ್ತು ರತ್ನದ ಪ್ಯಾಟೆ’ ಹಾಡೊಂದರಲ್ಲಿ ಕಾಣಿಸಿಕೊಂಡಿರುವುದು ವಿಶೇಷ.

ಮಣಿಕಾಂತ್ ಕದ್ರಿ ಹಾಗೂ ರವಿಶೇಖರ್ ಸಂಗೀತ ನೀಡಿರುವ ಈ ಚಿತ್ರದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಕೈಲಾಶ್ ಕೇರ್, ಕಾರ್ತಿಕ್, ಅನುರಾಧ ಭಟ್, ಹರೀಶ್ ಶೇರಿಗಾರ್, ರವಿಶೇಕರ್ ರಾಜಮಗ, ಅಕ್ಷತಾ ರಾವ್ ಅವರು ಹಾಡಿದ್ದು, ಎಲ್ಲ ಹಾಡುಗಳು ಸೂಪರ್ ಹಿಟ್ ಆಗಿವೆ.

ಅತ್ಯುತ್ತಮ ಚಿತ್ರಗಳ ಪಟ್ಟಿಯಲ್ಲಿ ಪಡ್ಡಾಯಿ ಮೂರನೇ ಅತ್ಯುತ್ತಮ ಚಿತ್ರವಾಗಿ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಪವರ್ ಸ್ಟಾರ್ ಪುನೀತ್‌ ರಾಜಕುಮಾರ್‌ ಅಭಿನಯದ ರಾಜಕುಮಾರ ಅತ್ಯುತ್ತಮ ಮನರಂಜನೆಯ ಚಿತ್ರವಾಗಿ ಆಯ್ಕೆಯಾಗಿದೆ. 'ಎಳೆಯರು ನಾವು ಗೆಳೆಯರು' ಚಿತ್ರ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿ ಪಡೆದಿದ್ದು, ಹಿರಿಯ ನಟಿ ತಾರಾ ಮನೋಜ್ಞವಾಗಿ ಅಭಿನಯಿಸಿರುವ ಹೆಬ್ಬೆಟ್‌ ರಾಮಕ್ಕ ಸಾಮಾಜಿಕ ಕಳಕಳಿಯ ಚಿತ್ರವಾಗಿ ಪ್ರಶಸ್ತಿಗೆ ಆಯ್ಕೆಯಾಗಿದೆ.
 
ಇನ್ನು ಮಂಜರಿ ಚಿತ್ರದಲ್ಲಿ ಉತ್ತಮ ಅಭಿನಯ ನೀಡಿದ ವಿಶ್ವತ್‌ ನಾಯ್ಕ ಅತ್ಯುತ್ತಮ ನಟ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ವಿಶೇಷ ಸಾಮಾಜಿಕ ಕಾಳಜಿಯ ಚಿತ್ರವಾಗಿ ಹೆಬ್ಬೆಟ್ ರಾಮಕ್ಕ ಚಿತ್ರಕ್ಕೆ ಪ್ರಶಸ್ತಿ ಲಭ್ಯವಾಗಿದ್ದು, ತಾರಾ ಅನುರಾಧಾಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದೆ. ಚಿತ್ರಮಂಜರಿ ಸಿನಿಮಾದ ವಿಶೃತ್ ನಾಯ್ಕಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ.
ಉಳಿದಂತೆ ಚಲನಚಿತ್ರ ಪ್ರಶಸ್ತಿಗೆ ಆಯ್ಕೆಯಾದ ಚಿತ್ರಗಳ ಪಟ್ಟಿ ಇಂತಿದೆ.

* ನಿರ್ದೇಶಕರ ಪ್ರಥಮ ನಿರ್ದೇಶನದ ಚಿತ್ರ – ಅಯನ
* ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ – ತುಳು ಭಾಷೆಯ ಸೋಫಿಯಾ
* ತೀರ್ಪುಗಾರರ ವಿಶೇಷ ಪ್ರಶಸ್ತಿ – ಮಹಾಕಾವ್ಯ ಚಿತ್ರದ ನಟ ಶ್ರೀದರ್ಶನ್‌, ರಾಗಾ ಸಿನಿಮಾದ ನಟ ಮಿತ್ರ
* ಅತ್ಯುತ್ತಮ ಪೋಷಕ ನಟ- ಮಂಜುನಾಥ ಹೆಗಡೆ (ಲಕ್ಷ್ಮೀನಾರಾಯಣದ ಪ್ರಪಂಚಾನೇ ಬೇರೆ)
* ಅತ್ಯುತ್ತಮ ಪೋಷಕ ನಟಿ- ರೇಖಾ (ಮೂಕ ನಾಯಕ)
* ಅತ್ಯುತ್ತಮ ಕತೆ – ಹನುಮಂತ ಬಿ. ಹಾಲಿಗೇರಿ (ಕೆಂಗುಲಾಬಿ)
* ಅತ್ಯುತ್ಯಮ ಚಿತ್ರಕಥೆ- ವೆಂಕಟ್ ಭಾರಧ್ವಾಜ್ (ಕೆಂಪಿರ್ವೆ)
* ಅತ್ಯುತ್ಯಮ ಸಂಭಾಷಣೆ-ಎಸ್.ಜಿ.ಸಿದ್ದರಾಮಯ್ಯ (ಹೆಬ್ಬೆಟ್ ರಾಮಕ್ಕ)
* ಅತ್ಯುತ್ತಮ ಛಾಯಾಗ್ರಹಣ-ಸಂತೋಶ್ ರೈ ಪತಾಜೆ (ಚಮಕ್)
* ಅತ್ಯುತ್ತಮ ಸಂಗೀತ ನಿರ್ದೇಶನ-ವಿ.ಹರಿಕೃಷ್ಣ (ರಾಜಕುಮಾರ)
* ಅತ್ಯುತ್ತಮ ಸಂಕಲನ- ಹರೀಶ್ ಕೊಮ್ಮ (ಮಫ್ತಿ)
* ಅತ್ಯುತ್ತಮ ಬಾಲನಟ- ಮಾಸ್ಟರ್ ಕಾರ್ತಿಕ್ (ರಾಮರಾಜ್ಯ)
* ಅತ್ಯುತ್ತಮ ಬಾಲನಟಿ- ಶ್ಲಘ ಸಾಲಿಗ್ರಾಮ (ಕಟಕ)


Share