ಬಂಟ್ವಾಳ: ಮನೆಗೆ ಬೆಂಕಿ; ದೇವಾಡಿಗ ಮಹಿಳೆ ಸಜೀವ ದಹನ

ಬಂಟ್ವಾಳ: ಮನೆಯೊಂದಕ್ಕೆ ಶಾರ್ಟ್ ಸರ್ಕ್ಯೂಟ್ ಪರಿಣಾಮ ಬೆಂಕಿ ತಗುಲಿ ಮಹಿಳೆಯೋರ್ವರು ಸಜೀವ ದಹನವಾದ ಘಟನೆ ಬಂಟ್ವಾಳ ತಾಲೂಕಿನ ಕಾವಳಮುಡೂರಿನಲ್ಲಿ ನಡೆದಿದೆ.

ರೇವತಿ ( 40 ) ಬೆಂಕಿ ಅವಘಡಕ್ಕೆ ಸಿಲುಕಿ ಮೃತಪಟ್ಟ ಮಹಿಳೆ.

ರೇವತಿ ಅವರು ನಿನ್ನೆ ರಾತ್ರಿ ಒಬ್ಬಂಟಿಯಾಗಿ ಮನೆಯಲ್ಲಿ ಮಲಗಿದ್ದರು. ಈ ಸಂದರ್ಭ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ ಹತ್ತಿಕೊಂಡಿದೆ. ಪರಿಣಾಮ ಮಹಿಳೆ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮೃತ ಮಹಿಳೆಯನ್ನು ರೇವತಿ (40) ಎಂದು ಗುರುತಿಸಲಾಗಿದೆ. ಇವರು ಅವಿವಾಹಿತೆಯಾಗಿದ್ದು, ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು. 

ಒಂದು ವಾರದ ಹಿಂದೆ ಈ ಮನೆಗೆ ಸಿಡಿಲು ಬಡಿದಿದ್ದು, ನಂತರ ರೇವತಿ ಅವರು ಸಂಬಂಧಿಕರ ಮನೆಯಲ್ಲಿ ನೆಲೆಸಿದ್ದರು. ಶನಿವಾರವಷ್ಟೇ ತಮ್ಮ ಮನೆಗೆ ಹಿಂದುರಿಗಿದ್ದು, ಅಂದೇ ಈ ಅವಗಢ ಸಂಭವಿಸಿದೆ. 

ಮನೆಯೊಳಗೆ ಕಟ್ಟಿಗೆ ರಾಶಿ ಹಾಕಿದ್ದು, ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿಕೊಂಡ ಬೆಂಕಿ ಕಟ್ಟಿಗೆ ರಾಶಿಗೆ ತಗುಲಿ ಮನೆಗೆ ವ್ಯಾಪಿಸಿರಬಹುದು ಎಂದು ಶಂಕಿಸಲಾಗಿದೆ. 

ತಡರಾತ್ರಿ ಮನೆ ಹೊತ್ತಿ ಉರಿಯುದನ್ನು ಕಂಡ ಊರವರು ತಕ್ಷಣ ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರೂ ಮಹಿಳೆಯನ್ನು ಉಳಿಸಿಕೊಳ್ಳಲಾಗಲಿಲ್ಲ. 

ರೇವತಿ ಅವರ ಮೃತದೇಹ ಸಂಪೂರ್ಣ ಸುಟ್ಟು ಹೋಗಿದ್ದು, ಬಂಟ್ವಾಳ ಸರಕಾರಿ ಆಸ್ಪತೆಯಲ್ಲಿ ಇರಿಸಲಾಗಿದೆ.  ಪೂಂಜಾಲಕಟ್ಟೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಅವರ ಆತ್ಮಕ್ಕೆ ಶಾಂತಿ ಸದ್ಗತಿ ಸಿಗಲಿ ಎಂದು ನಮ್ಮೆಲ್ಲರ ಪ್ರಾರ್ಥನೆ.

 


Share