ಪ್ರಕಾಶ್ ದೇವಾಡಿಗ ಮತ್ತು ಬಳಗದವರಿಂದ ಲಕ್ಷದೀಪೋತ್ಸವದಲ್ಲಿ ತಲೆದೂಗಿಸಿದ ಸ್ಯಾಕ್ಸೋಫೋನ್ ನಾದ ಮಾಧುರ್ಯದ ಅಲೆ!

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಂಪನ್ನಗೊಂಡ ಲಕ್ಷದೀಪೋತ್ಸವ ಸಂಭ್ರಮದಲ್ಲಿ ಸಂಗೀತ, ಸಾಹಿತ್ಯ, ನೃತ್ಯ ಕಲೆಗಳ ತೋರಣ. ನೆರೆದಿದ್ದ ಪ್ರೇಕ್ಷಕರಿಗೆ ಸರ್ವಕಲೆಗಳ ರಸದೌತಣ ಉಣಬಡಿಸಿತ್ತು. ಲಕ್ಷದೀಪೋತ್ಸವದ ಮೂರನೇ ದಿನ ನಡೆದ ಲಲಿತ ಕಲಾಗೋಷ್ಠಿಯಲ್ಲಿ ಖ್ಯಾತ ಸ್ಯಾಕ್ಸೋಫೋನ್ ವಾದಕ ಪ್ರಕಾಶ್ ದೇವಾಡಿಗ ಮತ್ತು ಬಳಗದವರಿಂದ 'ನಾದ ಮಾಧುರ್ಯ' ಕಾರ್ಯಕ್ರಮ ನಡೆಯಿತು. ತಂಡದಿಂದ ಮೊಳಗಿದ ಭಕ್ತಿ ಪ್ರಧಾನ ಹಾಡುಗಳು ನೆರೆದಿದ್ದ ಭಕ್ತರನ್ನು ಮಂತ್ರಮುಗ್ಧಗೊಳಿಸಿದ್ದವು.

'ಮಾತಾಡುವ ದೈವ ಮಂಜುನಾಥ' ಎಂಬ ಹಾಡಿನ ವಾದನವು ಮಂಜುನಾಥ ಸನ್ನಿಧಿಯಲ್ಲಿ ಮೊಳಗಿದ್ದು, ಕೇಳುಗರನ್ನು ಮೈ ನವಿರೇಳಿಸುವಂತೆ ಮಾಡಿತ್ತು. ಖ್ಯಾತ ಹಾಡುಗಳಾದ 'ತಂದನಾನ ಅಹಿ', 'ನೀಡು ಶಿವ ನೀಡದಿರು ಶಿವ', 'ಶಂಭೋ ಶಿವಶಂಭೋ' ವಾದನಗಳು ಭಕ್ತಿಪರವಶಗೊಳಿಸಿದವು.

ಕಾರ್ಯಕ್ರಮದ ಕೊನೆಯಲ್ಲಿ ಮೊಳಗಿದ, ರಾಷ್ಟ್ರಕವಿ ಕುವೆಂಪು ವಿರಚಿತ 'ಜಯ ಭಾರತ ಜನನಿಯ ತನುಜಾತೆ' ಹಾಡಿಗೆ ಸ್ಯಾಕ್ಸೋಫೋನ್ ವಾದ್ಯನಿನಾದ ನಾಡ ಪ್ರೇಮದ ಕಂಪನ್ನು ಹರಡಿತು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಕಾಶ್ ದೇವಾಡಿಗ, ಹುಟ್ಟೂರಿನ ದೇವಸ್ಥಾನದ ಸನ್ನಿಧಿಯಲ್ಲಿ ದೊರೆತ ಈ ಅವಕಾಶವು ಪುಣ್ಯದ ಫಲವೇ ಸರಿ ಎಂಬ ಭಾವನೆ ವ್ಯಕ್ತಪಡಿಸಿದರು.

ಗೋಪಾಲ ದೇವಾಡಿಗ ಬೆಳ್ತಂಗಡಿ (ಸಹ ಸ್ಯಾಕ್ಸೋಫೋನ್), ರಾಜಗೋಪಾಲ ಕಣ್ಣೂರು (ಕೊಳಲು), ಹೊನ್ನಪ್ಪ ದೇವಾಡಿಗ ಬಳ್ಳಮಂಜ (ಡೋಲು), ಸಾಯಿರಾಮ್ ಪುತ್ತೂರು (ತಬಲಾ), ಸುಹಾಸ್ ಹೆಬ್ಬಾರ್ ಶಾಂತಿಗೋಡು ಹಾಗೂ ಶ್ರೀಕಂಠವರ್ಮ ವಿಟ್ಲ (ರಿದಮ್ ಪ್ಯಾಡ್), ಪ್ರಸಾದ್ವರ್ಮ ವಿಟ್ಲ ((ಕೀಬೋರ್ಡ್), ಪುನೀತ್ ಬಳ್ಳಮಂಜ (ತಾಳ) ಸಾಥ್ ನೀಡಿದರು. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಬಿ ಯಶೋವರ್ಮ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾವಿದರನ್ನು ಗೌರವಿಸಿದರು.

ವರದಿ ಮತ್ತು ಚಿತ್ರ: ಅಂಬಿಕಾ ಕೈಲಾಸ, ಎಸ್.ಡಿ.ಎಂ, ಉಜಿರೆ


Share