ಬಾಲ್ಯದ ಸವಿ ನೆನಪು: ಲೋಕು ಕುಡ್ಲ ಅವರಿಗೆ ಅವರ ಶಾಲೆಯಲ್ಲಿ ಸನ್ಮಾನ

(ಶ್ರೀ ವಾಣಿ ವಿಲಾಸ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಅಶ್ವತ್ಥಪುರ, ಮೂಡುಬಿದರೆ)

ನಾನು ಮತ್ತು ನನ್ನ ಶಾಲೆ ..!

ನನ್ನಂತೆಯೇ ನಿಮ್ಮೆಲ್ಲರಿಗೂ ನಿಮ್ಮ ಬಾಲ್ಯದ ಶಾಲೆ ಇರುತ್ತದೆ .. ಮತ್ತೆ ಎಷ್ಟೋ ಸಮಯದ ನಂತರ ನಾವು ಕಲಿತ ಶಾಲೆಯ ಕಡೆಗೆ ಒಮ್ಮೆ ಹೋದಾಗ ನಮ್ಮ ಸದ್ಯದ ವಯಸ್ಸನ್ನು ಮರೆಸಿ ಬಿಡುತ್ತದೆ .. ಈ ಅನುಭವ ನನಗೆ ಬಹಳಷ್ಟು ಸಲ ಆಗಿ ಹೋಗಿದೆ .. ಆದರೆ ಈ ಬಾರಿ ನನಗಾದ ಕುಷಿ ಸಂತುಷ್ಟತೆಯ ಭಾವನೆಯನ್ನು ಬರವಣಿಗೆಯಲ್ಲಿ ವರ್ಣಿಸಲು ಆಗುತ್ತಿಲ್ಲ.. ನಾನು ಕಲಿತ ಶಾಲೆಯಲ್ಲಿ ಈಗಿನ ಪುಟ್ಟ ಮಕ್ಕಳ ಜೊತೆ ಪ್ರಾರ್ಥನೆಯಲ್ಲಿ , ದ್ವಾಜಾರೋಹಣದಲ್ಲಿ , ಮೆರವಣಿಗೆಯಲ್ಲಿ, ಒಟ್ಟಾರೆಯಾಗಿ ನನ್ನ ಶಾಲೆಯ ಈ ವರ್ಷದ ಸಂಪೂರ್ಣ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡೆ.. ನನ್ನ ಶಾಲೆಯ ಈಗಿನ ಮಕ್ಕಳ ಜೊತೆಗೆ ನಾನೂ ಮಗುವಾದೆ .. ನನ್ನ ಅಧ್ಯಾಪಕರ ವಿದ್ಯಾರ್ಥಿಯಾದೆ .. ನನ್ನ ಇಂಗ್ಲೀಷ್ ಅಧ್ಯಾಪಕರು ಕೃಷ್ಣ ಮೂರ್ತಿ ಮಾಷ್ಟ್ರು ಈಗ ನನ್ನ ಶ್ರೀ ವಾಣಿ ವಿಲಾಸ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ನನ್ನನ್ನು ಈ ಬಾರಿಯ ಶಾಲಾ ವಾರ್ಷಿಕೋತ್ಸವಕ್ಕೆ ಆಹ್ವಾನಿಸಿದರು .. ಮತ್ತೆ ಮಾತು ಮುಂದುವರಿಯುತ್ತಿದ್ದಂತೆ ಸ್ವಸ್ತಿ ವಾಚನ ನೀನು ಮಾಡಬೇಕು ಎಂದಾಗ ತಡವರಿಸದೆ ಆಯ್ತು ಎಂದೆ .. ಏಕೆಂದರೆ ಅಧ್ಯಾಪಕರು ಎನು ಹೇಳಿದರೂ ಸರಿ ಎಂದು ತಲೆ ಅಲ್ಲಾಡಿಸುವುದು ಆಗಿನಿಂದಲೂ ಗೌರವ ರೂಢಿ .. ಭಯ ಹಾಗೆಯೇ ಒಳಗಿರುತ್ತದೆ ..

ಆ ದಿನ ಒಮ್ಮೆ ಶಾಲೆಯ ಒಳ ಹೊಕ್ಕಾಗ ಮತ್ತು ನನ್ನ ಮಾಷ್ಟ್ರು .. ಟೀಚರ್ ಗಳನ್ನು ನೋಡಿದಾಗ ಭಯ ಇಮ್ಮಡಿಯಾದದ್ದು ಸುಳ್ಳಲ್ಲ .. ಮತ್ತೆ ನನ್ನ ಜೊತೆಗೆ ಕಲಿತ ನನ್ನ ಗೆಳೆಯ ಗೆಳತಿಯರನ್ನು ನೋಡಿದಾಗ ಆ ಹಳೆ ನೆನಪುಗಳನ್ನು ಮತ್ತಷ್ಟು ಮಾತಾಡಿದಾಗ ... ಒಂದು ಸಂಪೂರ್ಣ ದಿನವನ್ನು ಹೇಗೆ ಕಳೆದೆ ಎಂದೇ ಗೊತ್ತಾಗಲಿಲ್ಲ ..

ಪೋಟೋದಲ್ಲಿ ಇರುವುದು ನಾನು ಬಾಲ್ಯದಲ್ಲಿ ನಲಿದು ಕುಣಿದ ಅದೇ ವೇದಿಕೆ .. ವೇದಿಕೆಯಲ್ಲಿ ನನ್ನ ಅಧ್ಯಾಪಕ ಗುರುವರ್ಯರು.. ಪ್ರಮೀಳಾ ಟೀಚರ್.. ಕೃಷ್ಣ ಮೂರ್ತಿ ಸರ್ .. ಚಿಕ್ಕ ವಯಸ್ಸಿನಲ್ಲಿ ನನಗೆ ಬಿಡಿಕಾಸೂ ತೆಗೆದು ಕೊಳ್ಳದೆ ಸೂಜಿ ಚುಚ್ಚಿದ ನಮ್ಮ ಊರಿನ ಲಕ್ಷ್ಮಣ ಡಾಕ್ಟರು.. ಮೂಡಬಿದಿರೆ ಶಾಶಕೆರ್ ಎನ್ನ ಮೋಕೆದ ಉಮಾನಾಥ ಕೋಟ್ಯಾನ್ .. (ಉಮಾನಾಥಣ್ಣೆ) ಮತ್ತು ಹಿರಿಯರು.. ಮುಂದೆ ಸಭೆಯಲ್ಲಿ ನನ್ನ ಇನ್ನಷ್ಟು ಅಧ್ಯಾಪಕರು .. ಊರಿನ ಹಿರಿಯರು .. ಗೆಳೆಯರು .. ಶಾಲೆಯ ಪುಟ್ಟ ಮಕ್ಕಳು .. 

ಆ ಪುಟ್ಟ ಮಕ್ಕಳು ಬಣ್ಣ ಹಚ್ಚಿ ವೇದಿಕೆಯಲ್ಲಿ ಪುಟ್ಟ ಪುಟ್ಟ ಹೆಜ್ಜೆಯನ್ನಿಟ್ಟು ಕುಣಿವಾಗ ನನ್ನ ಬಾಲ್ಯದ ಪುಟಗಳನ್ನು ಮತ್ತೆ ತಿರುವಿದಂತಾಯಿತು.. ಇದಕ್ಕಿಂತ ಪುಣ್ಯ ಮಂತೊಂದು ಯಾವುದು .. ?

ಹೇಳುವುದಕ್ಕೆ ಇನ್ನಷ್ಟಿದೆ .. ಸಧ್ಯಕ್ಕೆ ಈ ಬರಹಕ್ಕೊಂದು ಅಲ್ಪವಿರಾಮ ..

ಪ್ರೀತಿಯಿಂದ ನಿಮ್ಮವನು
- ಲೋಕು ಕುಡ್ಲ


Share