"ಬಾಹುಬಲಿ ಅಹಿಂಸಾ ದಿಗ್ವಿಜಯಂ' - ಶಾಂತಿ ಒದಗಿಸಿದ ಮಹಾಕಾವ್ಯ: ಡಾ| ಮೊಯ್ಲಿ

ಬೆಳ್ತಂಗಡಿ: ತ್ಯಾಗಮೂರ್ತಿ ಭಗವಾನ್‌ ಬಾಹುಬಲಿಯ ಕುರಿತು ಶ್ರವಣಬೆಳಗೊಳದ ಸ್ವಾಮೀಜಿಗಳ ಆಶೀರ್ವಾದದಿಂದ ತಾನು ರಚಿಸಿರುವ "ಬಾಹುಬಲಿ ಅಹಿಂಸಾ ದಿಗ್ವಿಜಯಂ' ಗ್ರಂಥವು ತನಗೆ ಶಾಂತಿಯನ್ನು ಕೊಟ್ಟ ಮಹಾಕಾವ್ಯವಾಗಿದ್ದು, ನನ್ನ ಪರಿವರ್ತನೆಗೂ ಸಹಕಾರಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಡಾ| ಎಂ. ವೀರಪ್ಪ ಮೊಯ್ಲಿ ಹೇಳಿದರು. 

ಅವರು ಗುರುವಾರ ಅಮೃತ ವರ್ಷಿಣಿ ಸಭಾಂಗಣದಲ್ಲಿ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಜೈನ ಪರಂಪರೆಯ ಕುರಿತು ರಚಿತವಾದಷ್ಟು ಸಾಹಿತ್ಯ ಯಾವುದೇ ಪರಂಪರೆಯಲ್ಲೂ ರಚನೆಯಾಗಿಲ್ಲ. ಧರ್ಮಸ್ಥಳದ ಬಾಹುಬಲಿ ಪ್ರತಿಷ್ಠಾಪನೆ ವಿಸ್ಮಯವೆಂಬಂತೆ ನಡೆದು ಹೋಗಿದ್ದು, ಡಾ| ಹೆಗ್ಗಡೆ ಅವರಿಗೆ ಮಾತ್ರ ಇಂಥವುಗಳನ್ನು ನಡೆಸಲು ಸಾಧ್ಯ. ಜತೆಗೆ ಅಸಂಖ್ಯಾತ ಮಂದಿಗೆ ಆರ್ಥಿಕ ಸ್ವಾವಲಂಬನೆ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ನನ್ನ ಸಾಹಿತ್ಯ ಸಾಧನೆಗೆ ಹೇಮಾವತಿ ಹೆಗ್ಗಡೆ ಅವರ ತಂದೆ, ನನ್ನ ಗುರುಗಳೇ ಕಾರಣ ಎಂದರು. 
 
ಸಾಹಿತಿ, ನಾಡೋಜ ಹಂಪನಾ ಮಾತನಾಡಿ, ಸುಮಾರು 60 ವರ್ಷಗಳ ಹಿಂದೆ ತಾನು ಕ್ಷೇತ್ರಕ್ಕೆ ಬಂದು ಮೊದಲ ಭಾಷಣ ಮಾಡಿದ್ದೆ. ಆಗ ಡಾ| ಹೆಗ್ಗಡೆ ಪರಿವಾರದ ಎಲ್ಲರೂ ಸಣ್ಣ ವಯಸ್ಸಿನ ವರಾಗಿದ್ದರು. ಆದರೆ ಪ್ರಸ್ತುತ ಪರಿವಾರ ಹಾಗೂ ಕ್ಷೇತ್ರದ ಕೀರ್ತಿ ಸಾಕಷ್ಟು ಎತ್ತರಕ್ಕೆ ಬೆಳಗಿದೆ ಎಂದರು. 

ಗ್ರಂಥಗಳ ಬಿಡುಗಡೆ
ಪರಮಪೂಜ್ಯ ಆಚಾರ್ಯ ಶ್ರೀ 108 ವರ್ಧಮಾನ ಸಾಗರ್‌ ಜೀ ಮಹಾರಾಜ್‌ ಅವರು ಪರಮಪೂಜ್ಯ 108 ವಿಶುದ್ಧ ಸಾಗರ ಮುನಿ ಮಹಾರಾಜ್‌ ಅವರ "ಸೈಂತಾಲೀಸ್‌ ಶಕ್ತಿಯೋಂಕಾ ವಿಶದ್‌ ವ್ಯಾಖ್ಯಾನ್‌', ಪರಮಪೂಜ್ಯ 108 ಶ್ರೀ ಪುಣ್ಯಸಾಗರ ಮಹಾರಾಜ ಅವರು ಡಾ| ಮೊಲಿ ವಿರಚಿತ "ಬಾಹುಬಲಿ ಅಹಿಂಸಾ ದಿಗ್ವಿಜಯಂ' ಗದ್ಯಾನುವಾದ, ಪರಮಪೂಜ್ಯ 108 ಶ್ರೀ ವೀರ ಸಾಗರ ಮುನಿ ಮಹಾರಾಜ್‌ ಅವರು ವಿಜಯಾ ಜಿ. ಜೈನ್‌ ಅವರ "ಧರ್ಮಸ್ಥಳದ ಶ್ರೀ ಗೊಮ್ಮಟೇಶ್ವರ ಚರಿತ್ರೆ', ಪರಮಪೂಜ್ಯ 108 ಶ್ರೀ ಸಿದ್ಧಸೇನಾಚಾರ್ಯ ಮುನಿ ಮಹಾರಾಜ್‌ ಅವರು ಎಸ್‌.ಎಸ್‌. ಉಕ್ಕಾಲಿ ಮುಧೋಳ ವಿರಚಿತ "ಆದಿಪುರಾಣ ಗ್ರಂಥ', ಡಾ| ಮೊಯ್ಲಿ ಅವರು ಹೆಗ್ಗಡೆ ಪಟ್ಟಾಭಿಷೇಕದ ಸುವರ್ಣ ಮಹೋತ್ಸವದ ಗ್ರಂಥ ಮಾಲೆ, ಡಾ| ವಸಂತಕುಮಾರ ಪೆರ್ಲ ಅವರ "ದೇವಪುರ ಕುಡುಮ' ಕೃತಿ ಬಿಡುಗಡೆಗೊಳಿಸಿದರು. "ದೃಷ್ಟಾಂತ ದಿಂದ ಸಿದ್ಧಾಂತದ ಕಡೆಗೆ' ಕೃತಿ ಬಿಡುಗಡೆಗೊಂಡಿತು.

ಕೆ. ಅಭಯಚಂದ್ರ ಜೈನ್‌, ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಡಿ. ಸುರೇಂದ್ರಕುಮಾರ್‌, ಕಮಲಾ ಹಂಪನಾ, ದ.ಕ. ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಬೆಳ್ತಂಗಡಿ ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷ ಚಂದನ್‌ ಕಾಮತ್‌ ಇದ್ದರು. 

ಪ್ರೊ| ಬೈರಮಂಗಲ ರಾಮೇಗೌಡ ಮಹಾಕಾವ್ಯದ ವಿವರಣೆ ನೀಡಿದರು. ಡಾ| ಪುತ್ತೂರು ನರಸಿಂಹ ನಾಯಕ್‌ ಕಾವ್ಯ ವಾಚನ ಮಾಡಿದರು. ಜಿ.ಪಂ. ಮಾಜಿ ಉಪಾಧ್ಯಕ್ಷೆ ರಾಜಶ್ರೀ ಹೆಗ್ಡೆ ಸ್ವಾಗತಿಸಿದರು. ಎಸ್‌ಡಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಶ್ರುತಿ ಜೈನ್‌ ನಿರ್ವಹಿಸಿದರು. 

"ಜ್ಯೋತಿಷಿಗಳು ಮೊದಲೇ ತಿಳಿಸಿದ್ದರು'
ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಈ ದಿವಸವು ಬಹಳ ಅಪರೂಪದ ಒಳ್ಳೆಯ ದಿನವಾಗಿದೆ. ಕ್ಷೇತ್ರದಲ್ಲಿ ನಿರ್ಮಾಣಗೊಂಡಿದ್ದ ತಾತ್ಕಾಲಿಕ ಪೆಂಡಾಲ್‌ ಬಿದ್ದಿದ್ದು, ಅದು ಒಂದು ಗಂಟೆಯ ಮೊದಲು ನಡೆಯುತ್ತಿದ್ದರೆ ನಾವೆಲ್ಲರೂ ಅದರೊಳಗೆ ಇರುತ್ತಿದ್ದೆವು. ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿಯ ದಯೆ ಹಾಗೂ ಪೂಜ್ಯ ಮುನಿ ವರ್ಗದ ಸಾನ್ನಿಧ್ಯದಿಂದ ಅವಘಡ ತಪ್ಪಿದ್ದು, ಕ್ಷೇತ್ರದ ಮಹಾತೆ¾ಯನ್ನು ಅದು ತೋರಿಸುತ್ತದೆ ಎಂದರು.

ಮಹಾಮಸ್ತಕಾಭಿಷೇಕದ ತಯಾರಿಯಲ್ಲಿ ತೊಡಗಿದ್ದಾಗ 20 ದಿನಗಳ ಹಿಂದೆ ನನ್ನ ಮನಸ್ಸಿನಲ್ಲಿ ಒಂದು ಗೊಂದಲ ಕಾಡಿದ್ದು, 15 ದಿನಗಳ ಹಿಂದೆ ಜೋತಿಷಿಗಳ ಬಳಿ ಪ್ರಶ್ನೆ ಚಿಂತನೆ ನಡೆಸಲಾಯಿತು. ಆಗ ಅವರು ಯಾವುದೋ ಒಂದು ಅವಘಡ ನಡೆಯಲಿದ್ದು, ನೀವು ಕೆಲವು ಪೂಜೆಗಳನ್ನು ನಡೆಸಿದರೆ ಅದರ ತೀವ್ರತೆ ಕಡಿಮೆಯಾಗುತ್ತದೆ ಎಂದಿದ್ದರು. ಕ್ಷೇತ್ರದ ಶಕ್ತಿಗಳು ಅಪಾಯವನ್ನು ದೂರ ಮಾಡಿದೆ ಎಂದು ಡಾ| ಹೆಗ್ಗಡೆ ಅವರು ಸ್ಪಷ್ಟಪಡಿಸಿದರು.


Share