ಪ್ರಾಮಾಣಿಕತೆ ಮೆರೆದ ಸುರೇಶ್‌ ದೇವಾಡಿಗ! (ಓದಿ)

ಮಣಿಪಾಲ: ಇಲ್ಲಿನ ರಾಷ್ಟ್ರೀಕೃತ ಬ್ಯಾಂಕ್‌ ಒಂದರ ಬಳಿ ರಸ್ತೆಯಲ್ಲಿ ಬಿದ್ದಿದ್ದ ಪರ್ಸನ್ನು ಮಣಿಪಾಲ ಠಾಣೆಗೆ ಮುಟ್ಟಿಸಿ ಸ್ವಿಗ್ಗಿ ಡೆಲಿವರಿ ಬಾಯ್‌ ಸುರೇಶ್‌ ದೇವಾಡಿಗ ಪ್ರಾಮಾಣಿಕತೆ ಮೆರೆದಿದ್ದಾರೆ. ಪರ್ಸಿನಲ್ಲಿ  1 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 25 ಸಾವಿರ ರೂ. ನಗದು ಮತ್ತು ಮೊಬೈಲ್‌ ಇತ್ತು.

ವೃದ್ಧ ದಂಪತಿ ಜನಾರ್ದನ ಶೇಠ್ ಮತ್ತು ಗಿರಿಜಾ ಅವರು ಕಾರ್‌ ಶೋ ರೂಂವೊಂದಕ್ಕೆ ತೆರಳಿದ್ದು ಅಲ್ಲಿಂದ ಬ್ಯಾಂಕ್‌ಗೆ ಬಂದಿದ್ದರು. ಬ್ಯಾಂಕ್‌ನಿಂದ ವಾಪಸಾಗಿ ಮುಂದೆ ಬಂದ ಬಳಿಕ ಅವರಿಗೆ ಪರ್ಸ್‌ ಕಳೆದುಹೋಗಿದ್ದು ತಿಳಿದು ಠಾಣೆಗೆ ತೆರಳಿದರು. ಈ ವೇಳೆ  ಪೊಲೀಸ್‌ ಇನ್‌ಸ್ಪೆಕ್ಟರ್‌ ಸುದರ್ಶನ್‌ ಎನ್‌. ಮತ್ತು ಪಿಎಸ್‌ಐ ಶ್ರೀಧರ್‌ ನಂಬಿಯಾರ್‌ ಅವರು ವೃದ್ಧ ದಂಪತಿಯನ್ನು ಸಂತೈಸಿ ಮೊಬೈಲ್‌ಗೆ ಕರೆ ಮಾಡಿದರು. ಕರೆ ಸ್ವೀಕರಿಸದಿದ್ದಾಗ ಮೆಸೇಜ್‌ ಮಾಡಲಾಯಿತು. ಜತೆಗೆ ಲೊಕೇಶನ್‌ ಪತ್ತೆಗೆ ಕ್ರಮ ಜರಗಿಸಲಾಯಿತು.

ಬ್ಯಾಂಕ್‌ ಮುಂದೆ ರಸ್ತೆಯಲ್ಲಿ ಬಿದ್ದಿದ್ದ ಪರ್ಸನ್ನು ಗಮನಿಸಿದ ಪಳ್ಳಿ ನಿಂಜೂರು ನಿವಾಸಿ ಸುರೇಶ್‌ ಪರ್ಸಲ್ಲಿದ್ದ ಮೊಬೈಲಿಗೆ ಬಂದ ಕರೆ ಗಮನಿಸಿ ತನ್ನ  ಮೊಬೈಲಿನಿಂದ ಕರೆ ಮಾಡಿದ್ದಾರೆ. ಬಳಿಕ ಠಾಣೆಗೆ ಬಂದು ಪರ್ಸ್‌ ಹಿಂತಿರುಗಿಸಿದರು. ಪ್ರಾಮಾಣಿಕತೆ ಮೆರೆದದ್ದಕ್ಕೆ ವೃದ್ಧ ದಂಪತಿ ನೆನಪಿನ ಕಾಣಿಕೆ ನೀಡಿದರು. ಪೊಲೀಸ್‌ ನಿರೀಕ್ಷಕರು ಮತ್ತು ಉಪನಿರೀಕ್ಷಕರು ಅಭಿನಂದನೆ ಸಲ್ಲಿಸಿದರು.

~ ಉದಯವಾಣಿ
 


Share