ದೇವಾಡಿಗ ಯುವಜನರೇ ಸಮಾಜವನ್ನು ಮುನ್ನಡೆಸಿ!

ಮಂಗಳೂರು:  ನಾವು ದೇವಾಡಿಗರು, ದೇಶದ ಬಹುಸಂಖ್ಯಾತರ ಧರ್ಮಕ್ಕೆ ಸೇರಿದವರು, ನಮ್ಮ ಧರ್ಮದಲ್ಲಿ ನಮ್ಮಂತಹ ಜಾತಿ/ಸಮಾಜ/ಜನಾಂಗದವರು ಸಹಸ್ರಾರು. ದೇಶದ ಪ್ರಗತಿ ದೇಶದ ಜನರ ಪ್ರಗತಿ. ಎಲ್ಲಾ ಜಾತಿಗಳವರು ಅವರವರ ಸಂಘಗಳನ್ನು ಸ್ಥಾಪಿಸಿ ಮುನ್ನಡೆದಿದ್ದಾರೆ. ನಮ್ಮ ಹಿರಿಯರು 1925ರಲ್ಲಿ ಜೀವನ ನಿರ್ವಹಣೆಗಾಗಿ ವಲಸೆ ಹೋಗಿರುವ ಮುಂಬಯಿಯಲ್ಲಿ ಸಂಘ ಸ್ಥಾಪಿಸಿದ್ದಾರೆ. ಅಂತೆಯೇ ಮಂಗಳೂರಿನಲ್ಲಿ 1926ರಲ್ಲಿ, ನಂತರ ಉಡುಪಿ, ಮೂಡಬಿದಿರಿ, ಕಾರ್ಕಳದಲ್ಲಿ ಸಂಘಗಳು ಸ್ಥಾಪಿಸಲ್ಪಟ್ಟಿದೆ. ಅಂದಿನ ನಮ್ಮವರ ಪರಿಸ್ಥಿತಿಗನುಗುಣವಾಗಿ ಸಂಘಗಳು ಮುನ್ನಡೆದಿದೆ. ಏಳು, ಬೀಳು, ಲೋಪ-ದೋಷ ಪುನರ್ ಸಂಘಟನೆ ಸಹಜ.  ನಮ್ಮವರ ಪರಿಸ್ಥಿತಿ ಸುಧಾರಣೆ ಆದಂತೆ ಪ್ರಗತಿ ಪಥದಲ್ಲಿ ಮುನ್ನಡೆದಿದೆ. ನಮ್ಮ ಹಿರಿಯರು ಸಂಘ ಸ್ಥಾಪಿಸಿ, ಇಂದಿನ ಸ್ಥಿತಿಗೆ ತಂದಿರುವುದು, ನಮ್ಮ ಮುನ್ನಡೆಗೆ ಪೂರಕವಾಗಿದೆ. ವೇದಿಕೆಯಾಗಿದೆ. ನಾವಿಂದು ನಮ್ಮ ಹಿರಿಯರಿಗಿಂತ ಸಬಲರಾಗಿದ್ದೇವೆ. ಅದರಲ್ಲಿ ನಮ್ಮ ಹಿರಿಯರ ದುಡಿಮೆಯನ್ನು ಅಲ್ಲಗಳೆಯ ಬರುವುದಿಲ್ಲ. ನಮ್ಮ ಮುನ್ನಡೆಗೆ ಮಾರ್ಗದರ್ಶನವಾಗುವಂತೆ, ನಮ್ಮ ಹಿರಿಯರ ದುಡಿಮೆಯ ವಿಮರ್ಶೆ ಅಗತ್ಯವೆನಿಸುವಲ್ಲಿ ಮಾಡಬಹುದು. ಟೀಕಿಸುವ ನೆಲೆಯಲ್ಲಿ ಮಾಡುವುದು ತರವಲ್ಲ.

ಕೂಡಲೇ ಮಾಹಿತಿಯನ್ನು ಹೊಂದುವ, ಬಹುತೇಕ ನಮ್ಮವರನ್ನು ಸಂಪರ್ಕಿಸುವ ಸೌಕರ್ಯ ಇಂದು ನಮ್ಮಲ್ಲಿ ಬಹುಮಂದಿಯ ಬೆರಳ ತುದಿಯಲ್ಲಿದೆ. ನಮ್ಮದೇ ಆದ ಸಾಮಾಜಿಕ, ಕೌಟುಂಬಿಕ ಜಾಲ ತಾಣಗಳೂ ಇದೆ. ನಮ್ಮವರು ದೇಶದ ಜನಸಂಖ್ಯೆಯಲ್ಲಿ ಒಂದಂಶ, ದೇಶದ ಪ್ರಗತಿಗೆ ನಮ್ಮವರೂ ಪೂರಕವಾಗಬೇಕು. ಜಾತಿ ವ್ಯವಸ್ಥೆ ಮೊದಲೇ ಇತ್ತು. ಯಾರು ಬಿಟ್ಟರು ಆ ವ್ಯವಸ್ಥೆ ಹೋಗುವುದು ಸುಲಭ ಸಾಧ್ಯವಲ್ಲ. ಅಂತರ್ ಜಾತಿ, ಧರ್ಮದ ವಿವಾಹಗಳಿಂದ ಜಾತಿ ಹೋಗುವುದಿಲ್ಲ. ಜಾತಿಯತೆ ಕಡಿಮೆ ಆಗ ಬಹುದಷ್ಟೇ! ಕಡಿಮೆ ಆಗಿರುವುದು ನ್ಯಾಯ, ಆತ್ಮಾಭಿಮಾನ, ಪ್ರಗತಿಗೆ ಅಗತ್ಯ. ಆತ್ಮಾಭಿಮಾನದ ಪ್ರಗತಿಯಿಂದ ಜಾತಿ ವ್ಯವಸ್ಥೆಯ ತೀಕ್ಷಣತೆಯು ಕೊನೆಗೊಳ್ಳುವಂತಾಗುವುದು.

ನಮ್ಮವರ ಪ್ರಗತಿ ಸಾಧನೆಗಾಗಿ ನಾವು ದುಡಿಯಬೇಕಾದ ಕ್ಷೇತ್ರಗಳನ್ನು ಆಯ್ಕೆ ಮಾಡಿ ಗುರುತಿಸಿಕೊಳ್ಳಬೇಕು. ಉದಾಹರಣೆಗೆ, ನಮ್ಮವರ ಮೂಲ ಸ್ಥಳವಾದ ಪಶ್ಚಿಮ ಕರಾವಳಿಯಲ್ಲಿಯ ನಮ್ಮವರು ಮಂಗಳೂರಲ್ಲಿ 1926 ಸಂಘ ಸ್ಥಾಪಿಸಿದರು. 1928ರಲ್ಲಿ ಸ್ವಂತ ಕಟ್ಟಡ ಆಗಬೇಕೆಂಬುದನ್ನು ಗುರುತಿಸಿ, 1928ರಲ್ಲಿ ನಿವೇಶನ ಹೊಂದಿದರು. 1930ರಲ್ಲಿ ಕಟ್ಟಡ ಹೊಂದಿದರು. 1956ರಲ್ಲಿ ಸಂಘವನ್ನು ಪುನರ್ ಸಂಘಟಿಸಿ, ನೋಂದಣಿಗೊಳಿಸಿದರು. 1962ರಲ್ಲಿ ಸಮಾನಭವನ ಕಲ್ಯಾಣ ಮಂಟಪವನ್ನು ರಚಿಸಿದರು. ವಿದ್ಯೆಗೆ ಪ್ರೋತ್ಸಾಹ ನೀಡಲಾರಂಭಿಸಿದರು. ಸಾವಿರಾರು ಮಂದಿ ಸಂಘದ ಸದಸ್ಯರಾದರು. ಹಲವು ಕಡೆ ಸಂಘಗಳಾದವು. ನೂತನ ಕಟ್ಟಡವಾಯಿತು. ಶಿಕ್ಷಣ ಸಂಸ್ಥೆಯೂ ಆಯಿತು. ಮುಂಬಯಿ, ಮಂಗಳೂರು, ಉಡುಪಿ, ಹಿರಿಯಡಕ, ಮೂಡಬಿದಿರಿ, ಸುರತ್ಕಲ್, ಕಾರ್ಕಳ, ವೇಣೂರು ಇಲ್ಲಿ ಹೀಗೆ ಎಂಟು ಊರುಗಳಲ್ಲಿ ನಿವೇಶನಗಳೂ, ಕಟ್ಟಡಗಳೂ ಆಯಿತು. ಬೆಂಗಳೂರು, ಬ್ರಹ್ಮಾವರಗಳಲ್ಲಿ ನಿವೇಶನವೂ ಆಯಿತು. ಕಟ್ಟಡಗಳು ಆಗುತ್ತಿವೆ. ಕಾಟಿಪಳ್ಳದಲ್ಲಿ ನಿವೇಶನವಿದೆ. ಮುಂಬಯಿ ಸಂಘದ ದುಡಿಮೆ ಅಪಾರ. ಬಾರ್ಕೂರಿನಲ್ಲಿ ದೇವಸ್ಥಾನವು ಆಯಿತು.

ಇಂದು ನಮ್ಮ ಸಮಾಜದಲ್ಲಿ ದೊಡ್ಡ ಸಂಖ್ಯೆಯ ವಿದ್ಯಾವಂತ ಯುವಜನರು ಎಲ್ಲಾ ಕಡೆಗಳಲ್ಲಿ ಇದ್ದಾರೆ. ಅನಿವಾಸಿ ಭಾರತೀಯರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಕೆಲವರು ತಮ್ಮಷ್ಟಕ್ಕೆ ತಾವು ಅಕ್ಷಯ ಕಿರಣ ಸೇವಾದಾರರಾಗಿ ನೊಂದವರಿಗೆ ವೈದ್ಯಕೀಯ ಸಹಾಯ ಹಸ್ತ ನೀಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಮಂದಿ ಸಕ್ರಿಯರಾಗಿದ್ದು ಸಮಾಜದ ಬಗ್ಗೆ ಚರ್ಚಿಸುವ ಮುಖೇನ ಜಾಗೃತಿ ಮೂಡಿಸುತ್ತಿದ್ದಾರೆ. ಹೆಮ್ಮೆ ಎನಿಸುತ್ತದೆ.

ಮುಂದಿನ 7 ಮತ್ತು 8ನೇ ವರ್ಷದಲ್ಲಿ ಅಂದರೆ 2025 ಮತ್ತು 2026ರಲ್ಲಿ ಅನುಕ್ರಮವಾಗಿ ಮುಂಬಯಿ ಮತ್ತು ಮಂಗಳೂರು ಸಂಘಗಳು ನೂರು ವರ್ಷಗಳನ್ನು ಪೂರೈಸಲಿವೆ. ಶತಮಾನದ ಸಂಭ್ರಮವನ್ನು ಕಾಣಲಿವೆ. ನಾವು ಸಮಾಜಬಾಂಧವರು ಸಂತೋಷ ಸಂಭ್ರಮ, ಹೆಮ್ಮೆ ಪಡುವಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಸಬಲರೂ, ಸಂಪನ್ನರೂ ಆದ ನಮ್ಮ ಯುವಜನತೆ, ಶತಮಾನೋತ್ಸವದ ಸಂತೋಷ, ಸಂಭ್ರಮ, ಹೆಮ್ಮೆಯನ್ನು ತಮ್ಮದನ್ನಾಗಿಸಿಕೊಳ್ಳಬೇಕು. ಸಂಘಗಳ ಶತಮಾನೋತ್ಸವದ ಅಂಗವಾಗಿ ಸಮಾಜಬಾಂಧವರಿಗೆ ಮೇಲಾಗಿ ಮುಂದಿನವರಿಗೆ ಉಪಯುಕ್ತವಾದ, ಆತ್ಮಾಭಿಮಾನದ ಪ್ರಗತಿದಾಯಕ ಸ್ಮರಣೀಯವಾದ ಕೊಡುಗೆ ನೀಡಬೇಕು. ಉದಾಹರಣೆಗಾಗಿ ಕಡಿಮೆ ವೆಚ್ಚದಲ್ಲಿ ಉನ್ನತ ಶಿಕ್ಷಣ ಹೊಂದುವ ನಮ್ಮದೇ ಆದ ವಿದ್ಯಾಸಂಸ್ಥೆಯ ವ್ಯವಸ್ಥೆ, ನಮ್ಮವರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶದಲ್ಲಿ ದೇವಾಡಿಗ ಭವನ, ವಿದ್ಯಾರ್ಥಿ ನಿಲಯ, ಮತ್ತಿತರ ಬಹುಮಂದಿಗೆ ಸೂಕ್ತವೆನಿಸುವ ರಚನಾತ್ಮಕ ಕಾರ್ಯಗಳನ್ನು ಸಂಘದ ಕಾರ್ಯಕರ್ತರೊಂದಿಗೆ ಸೇರಿಸಿಕೊಂಡು, ತಮ್ಮ ಅಸ್ಥಿತ್ವವು ಎದ್ದು ಕಾಣುವ ರೀತಿಯಲ್ಲಿ v Àಮ್ಮ ಮುತುವರ್ಜಿಯ ದುಡಿಮೆಯ ಮೂಲಕ ಸಾಧಿಸಿ, ಸಮಾಜಬಾಂಧವರ ಸಂತೋಷ, ಸಂಭ್ರಮವನ್ನು ದ್ವಿಗುಣಗೊಳಿಸಬೇಕು, ಸಾರ್ವಜನಿಕ ನೆಲೆಯಲ್ಲಿ ಸಮಾಜದ ಗೌರವ, ಪ್ರತಿಷ್ಠೆ ಹೆಚ್ಚುವುದರೊಂದಿಗೆ ಅವರಿಗೆ ಉಪಯೋಗವಾಗುವ ಕಾರ್ಯವನ್ನು ಮಾಡಬೇಕು.

ಈ ದಿಸೆಯಲ್ಲಿ ಆಸಕ್ತ ಯುವಜನತೆ, ಮೊದಲ ಹಂತದಲ್ಲಿ ಕಾರ್ಯನಿರತ ಸಂಘಗಳ ಯುವಜನತೆಯ ಪ್ರತಿನಿಧಿಗಳನ್ನು ಈ ವಿಚಾರದಲ್ಲಿ ವಾಟ್ಸಾಫ್, ಮೊಬೈಲು, ಜಾಲತಾಣಗಳ ಮುಖೇನ ಸಂಪರ್ಕಿಸಿ, ಸಮಾಜದ ಆತ್ಮಾಭಿಮಾನದ ಪ್ರಗತಿ ಸಾಧನೆಗೆ ಯಾವ ಯಾವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು, ಆ ಕಾರ್ಯಕ್ರಮಗಳನ್ನು ಯಾವ ಆದ್ಯತೆಯಲ್ಲಿ ಅನುಷ್ಠಾನಗೊಳಿಸಬೇಕು. ಅನುಷ್ಠಾನಕ್ಕಾಗಿ ಸಂಪನ್ಮೂಲವನ್ನು ಹೇಗೆ ಕ್ರೋಢೀಕರಿಸಬೇಕು ಎಂಬುದನ್ನು ವಿಚಾರ ವಿನಿಮಯ ನಡೆಸಿ ಗುರುತಿಸಿಕೊಳ್ಳಬೇಕು. ಹಾಗೆ ಗುರುತಿಸಿರುವುದನ್ನು ಎಲ್ಲರ ಅವಗಾಹನೆಗೆ ತರಬೇಕು. ಈ ವಿಚಾರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳ ಬಯಸುವ ಸಮಾಜಾಭಿಮಾನಿ ಯುವಜನತೆಯ ಸಭೆಯೊಂದನ್ನು ಬಹುಮಂದಿಯ ಅನುಕೂಲತೆಗನುಗುಣವಾಗಿ ಸಾಕಷ್ಟು ಮುಂಚಿತ ವಿಷಯ ಸಹಿತ ತಿಳಿಸಿ, ಕರೆದು ಚರ್ಚಿಸಿ, ನಿರ್ಧರಿಸಿ ಮತ್ತೆ ವಾಟ್ಸಫ್ ಮೊಬೈಲು, ಜಾಲತಾಣಗಳ ಮುಖೇನ ಎಲ್ಲರ ಗಮನಕ್ಕೆ ತಂದು, ಹೆಚ್ಚಿನ ಯುವಜನತೆಯ ಸಭೆ ಕರೆದು ಕಾರ್ಯಕ್ರಮಗಳ ಕುರಿತು ಪರಿಶೀಲನೆಯನ್ನು ಯೋಚನೆ, ವಿವೇಚನೆಯಿಂದ ನಡೆಸಿ, ನಿರ್ಧರಿಸಬೇಕು. ಸಭೆಯಲ್ಲಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಆಸಕ್ತ ಯುವಜನರ ಸಮಿತಿಯನ್ನು ರಚಿಸಿ, ಆ ಸಮಿತಿಗಳವರಿಗೆ ಅವಕಾಶ ಕಲ್ಪಿಸಿಕೊಡಬೇಕು. ಸಭೆಯಲ್ಲಿ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಸಂಪನ್ಮೂಲಗಳ ಕ್ರೋಢೀಕರಣ, ವಿನಿಯೋಗದ ಕುರಿತು ಯೋಜನೆಯನ್ನು ರೂಪಿಸಬೇಕು. ಸಭೆಗಳ ಕನಿಷ್ಠ ವೆಚ್ಚವನ್ನು, ಸ್ವಾಭಿಮಾನಿ, ಆಸಕ್ತ, ಸಮಾಜದ ಬಗ್ಗೆ ಕಳಕಳಿ, ಅಭಿಮಾನವಿರುವ ಯುವಜನತೆ, ತಮ್ಮ ಸ್ವಾಯತ್ತತೆಯನ್ನು ಕಾಯ್ದುಕೊಳ್ಳುವ ರೀತಿಯಲ್ಲಿ ತೊಡಗಿಸಿಕೊಳ್ಳಬೇಕು.

ನಾನು ಶ್ರೀ ಯಂ. ವೀರಪ್ಪ ಮೊಯಿಲಿಯವರ ಚುನಾವಣೆಯ ವಿಚಾರದಲ್ಲಿ ಕೆಲವರು ಮಿತ್ರರು ದೇವಾಡಿಗ ಡಾಟ್ ಕಾಮ್‍ನಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳ ಕುರಿತು ನನ್ನ ವಿಚಾರವನ್ನು ವಾಟ್ಸಾಪ್‍ನಲ್ಲಿ ಬರೆದಿರುತ್ತೇನೆ. ಇದೀಗ ನಮ್ಮ ಕರ್ನಾಟಕದಲ್ಲಿ ಚುನಾವಣೆ ಮುಗಿದಿದೆ. ಒಂದು ತಿಂಗಳ ನಂತರ ಫಲಿತಾಂಶ ಬರುತ್ತದೆ. ಸರಕಾರ ರಚನೆ ಆಗುತ್ತದೆ. ಇನ್ನು ಸಮಾಜದಲ್ಲಿ ರಾಜಕೀಯ ವಿಚಾರಗಳ ಪ್ರಸ್ತಾಪದ ಅಗತ್ಯ ಕಂಡು ಬರುವುದಿಲ್ಲ. ಸಮಾಜದ ಪ್ರಗತಿಯ ಬಗ್ಗೆ, ಸಂಘಟನೆಯ ಬಗ್ಗೆ, ಐಕ್ಯತೆಯ ಬಗ್ಗೆ, ಯುವಜನತೆ ಪ್ರಬುದ್ಧ ಕಾರ್ಯಶೀಲ ಚಿಂತನೆಯಂತೆ ಎಲ್ಲರೂ ದುಡಿಯುವುದರೊಂದಿಗೆ ಹಿರಿಯರು ಸ್ಥಾಪಿಸಿರುವ 94, 95 ವರ್ಷಗಳ ಹಿಂದಿನ ಸಂಘಗಳನ್ನು ಉಳಿಸಿಕೊಂಡು, ಎಲ್ಲರ ಸೇರುವಿಕೆಯೊಂದಿಗೆ ಪ್ರಜಾಪ್ರಭುತ್ವ ರೀತಿಯಲ್ಲಿ ಮುನ್ನಡೆಸಲು ಯುವಜನತೆಗೆ ಅವಕಾಶ ಮಾಡಿಕೊಡಲು ಶ್ರೀ ಯಂ. ವೀರಪ್ಪ ಮೊಯಿಲಿ ಮತ್ತಿತರ ಹಿರಿಯರು, ಏನು ಮಾಡಬೇಕೆಂಬುದನ್ನು, ದೇವಾಡಿಗ ಸಮಾಜದ ಹಿತಸಾಧನೆಗೆ ಸೀಮಿತವಾಗಿ (ಇತರ ವಿಷಯಗಳಿಗೆ ಅವಕಾಶ ಕೊಡದೆ) ವಿಚಾರ ವಿನಿಮಯ ನಡೆಸಿ ನಿರ್ಧರಿಸೋಣ ಎಂದು ಸೂಚಿಸ ಬಯಸುತ್ತೇನೆ.

ಪ್ರಾಯ, ಆರೋಗ್ಯದ ದೃಷ್ಟಿಯಿಂದ ನಾನು ಈ ದಿಸೆಯಲ್ಲಿ ಮುಂದುವರಿಯಲು ಸಮರ್ಥನಲ್ಲ. ನನ್ನಿಂದ ಆದಷ್ಟು ಆರ್ಥಿಕ ಮತ್ತಿತರ ಸಹಕಾರ ನೀಡುತ್ತೇನೆ. ಈ ನನ್ನ ವಿಚಾರವನ್ನು ವಾಟ್ಸಾಪ್ ಮುಖೇನ ಮಾತ್ರವಲ್ಲದೆ ಸಂಘಗಳಿಗೆ ಮತ್ತು ಕೆಲ ಹಿರಿಯರಿಗೆ ಹಾಗೂ ಶ್ರೀ ಯಂ. ವೀರಪ್ಪ ಮೊಯಿಲಿಯವರಿಗೆ ಪತ್ರರೂಪದಲ್ಲಿ ಪ್ರತ್ಯೇಕವಾಗಿ ಕಳುಹಿಸಿರುತ್ತೇನೆ. ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದು ಸಮಾಜದವರು ಹೆಮ್ಮೆ ಪಡುವಂತೆ ಮಾಡಿರುವ ನನ್ನ ನೆಚ್ಚಿನ ವಿದ್ಯಾರ್ಥಿ, ವಿಧ್ಯಾರ್ಥಿನಿಯರಿಗೆ ಶುಭ ಕೋರಿ, ಅಭಿನಂದಿಸಿ ಸೃಷ್ಟಿಕರ್ತನ ಅನುಗ್ರಹ ಸದಾ ಅವರಿಗೆ ಇರಲಿ ಎಂದು ಹಾರೈಸುತ್ತೇನೆ.

ನನ್ನೀ ವಿಚಾರವನ್ನು ಮೆಚ್ಚಿಕೊಂಡು ಕಾರ್ಯಗತಗೊಳಿಸಿ ಸಮಾಜದ ಪ್ರಗತಿಗೆ ಸಮಾಜಾಭಿಮಾನಿ ಯುವಜನತೆ ದುಡಿಯುವರೆಂಬ ಭರವಸೆ ಇಟ್ಟುಕೊಂಡಿರುತ್ತೇನೆ.

ಗೌರವಪೂರ್ವಕ ವಂದನೆಗಳೊಂದಿಗೆ,

ಯಂ. ಜಯಾನಂದ ದೇವಾಡಿಗ; ಮಂಗಳೂರು 

ದಿನಾಂಕ: 28-04-2019        Tel: 8618921855


Share