ಸಾಧನೆಗಳ ಪ್ರತಿಭಾ ಕಾರಂಜಿ ನಮ್ಮ ತರುಣಿ ಶ್ರಾವ್ಯ

ಪ್ರತಿಭೆ ಅನ್ನುವುದು ಅವಕಾಶಗಳನ್ನು ಅನ್ವೇಷಣೆ ಮಾಡುತ್ತಾ ಪ್ರೋತ್ಸಾಹದ ಹಿರಿಮೆಯನ್ನು ಪಡೆಯುತ್ತಾ ವ್ಯಕ್ತಿಯ ಆತ್ಮವಿಶ್ವಾಸವನ್ನು ಹೆಚ್ಚಿಸುವ ವೇದಿಕೆ. ಇಂಥ ವೇದಿಕೆಯಲ್ಲಿ ಹೆಜ್ಜೆ ಇಡುತ್ತಾ ಸಾಧನೆಯ ಶಿಖರವನ್ನು ಏರುತ್ತಿರುವರಲ್ಲಿ ಎಚ್.ಶ್ರಾವ್ಯ ಕೂಡ ಒಬ್ಬರು.

ಎಚ್.ಯಾದವ್ ಮತ್ತು ಬಬಿತ ದಂಪತಿಯ ಪುತ್ರಿಯಾಗಿರುವ ಶ್ರಾವ್ಯ.ನೃತ್ಯದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿರುವವರು‌‌.ಬಾಲ್ಯದಿಂದಲೂ ನೃತ್ಯದಲ್ಲಿ ಗುರುತಿಸಿಕೊಂಡು, ಮೊದಲು ಅಂಗನವಾಡಿಯ ವೇದಿಕೆಯಲ್ಲಿ ಕೊರವಂಜಿ ನೃತ್ಯವನ್ನು ಮಾಡಿ ತನ್ನ ಪ್ರತಿಭೆಯ ಮೊಳಕೆಯನ್ನು ಚಿಗುರಿಸಿ ಮುಂದೆ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡು,ಇಳಿ ವಯಸ್ಸಿನಲ್ಲಿ ಹೆತ್ತವರ,ಶಿಕ್ಷಕರ ಪ್ರೋತ್ಸಾಹದಿಂದ ಹಲವಾರು ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದುಕೊಂಡು ಸಾಧನೆಯ ಹೆಜ್ಜೆಗಳನ್ನು ಇಡುತ್ತಾ ಸಾಗುತ್ತಿದ್ದಾರೆ.

ಉಡುಪಿಯ ಪ್ರತಿಷ್ಠಿತ ನೃತ್ಯ ಸಂಸ್ಥೆ 'ಹೆಜ್ಜೆ ಗೆಜ್ಜೆ' ಯಲ್ಲಿ  8ನೇ ವಯಸ್ಸಿನಿಂದ ಭರತನಾಟ್ಯ ಅಭ್ಯಾಸವನ್ನು  ನೃತ್ಯ ಸಿಂಧು ಶ್ರೀಮತಿ ಯಶಾ ರಾಮಕೃಷ್ಣ ಅವರಿಂದ ಪಡೆದುಕೊಂಡು ಬಂದಿದ್ದಾರೆ.ಶಾಸ್ತ್ರೀಯ, ಲಘು ಶಾಸ್ತ್ರೀಯ ಅಲ್ಲದೆ ಜಾನಪದ ನೃತ್ಯಗಳನ್ನು ಬಲ್ಲ ಇವರು ಹೆಜ್ಜೆ ಗೆಜ್ಜೆಯ ಅಷ್ಟನಾಯಕಿ, ಮೇಘದೂತ, ಸುಳಾದಿ ಹೀಗೆ ಹಲವಾರು ಬಗೆಯ ನತ್ಯ ಪ್ರಕಾರಗಳಲ್ಲಿ ಪಾಲ್ಗೊಂಡು ಹೆಜ್ಜೆಗಳನ್ನು ಇಡುತ್ತಾ ಚಪ್ಪಾಳೆಯನ್ನು ಗಿಟ್ಟಿಸಿಕೊಂಡವರು.

ಕಳೆದ 14 ವರ್ಷಗಳಿಂದ ಭರತನಾಟ್ಯದಲ್ಲಿ ಪ್ರವೀಣೆಳಾದ ಇವರು ಮೈಸೂರು, ಚಿಕ್ಕಮಗಳೂರು ಶಿರಸಿ, ಬೈಂದೂರು, ಸಾಲಿಗ್ರಾಮ, ಹೆರಂಜೆ, ಹಿರಿಯಡಕ ಹಲವಾರು ಕಡೆಗಳಲ್ಲಿ ಶಾಸ್ತ್ರೀಯ, ಲಘು ಶಾಸ್ತ್ರೀಯ ಜಾನಪದ,ತಾಂಜಾವೂರು ಶೈಲಿ ಪ್ರಕಾರದಲ್ಲಿ ಸುಮಾರು 500 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ. ಅಪ್ಪ ಅಮ್ಮ‌ ಊರ ಜನರೆಲ್ಲಾ ಇವರ ಪ್ರತಿಭೆಗೆ ಬೆನ್ನೆಲುಬಾಗಿ ನಿಂತಿದ್ದಾರೆ.

ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನ, ಬಹುಮಾನಗಳನ್ನು ಪಡೆದುಕೊಂಡು ಮುಂದೆ ಸಾಗುತ್ತಿದ್ದಾರೆ. ಕರ್ನಾಟಕ ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಭರತನಾಟ್ಯ ಜೂನಿಯರ್, ಸೀನಿಯರ್, ವಿದ್ವತ್ ಪೂರ್ವ ಮತ್ತು ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುತ್ತಾರೆ. ಪ್ರತಿಭಾ ಕಾರಂಜಿಯಲ್ಲಿ ಹಲವಾರು ಬಹುಮಾನಗಳನ್ನು ಪಡೆದಿದ್ದಾರೆ. ಕನ್ನಡ ಸಂಸ್ಕೃತಿ ಇಲಾಖೆಯವರು 2007 ನೇ ಸಾಲಿನಲ್ಲಿ ನಡೆಸಿದ ಬಾಲ ಪ್ರತಿಭೆ ಸ್ಪರ್ಧೆಯಲ್ಲಿ  ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.2011ರಲ್ಲಿ ಮಕ್ಕಳ ಉತ್ಸವದಲ್ಲಿ ಪ್ರಥಮ ಸ್ಥಾನದ ಮನ್ನಣೆ. 2018 ನೇ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ನೀಡುವ ಶಿಷ್ಯ ವೇತನಕ್ಕೆ ಆಯ್ಕೆಗೊಂಡಿದ್ದಾರೆ.

ನೃತ್ಯದೊಂದಿಗೆ ಯಕ್ಷಗಾನ, ಚೆಂಡೆ,ಪೆನ್ಸಿಲ್ ಸ್ಕೆಚ್, ಮೆಹೆಂದಿ, ಕವನ ರಚನೆ, ವರ್ಲಿ ಆರ್ಟ್, ಹೀಗೆ ಇನ್ನಿತರ ಕ್ಷೇತ್ರದಲ್ಲೂ ಸಾಧನೆಯ ಕಿರು ಹೆಜ್ಜೆಗಳನ್ನು ಇಡುತ್ತಿದ್ದಾರೆ.

ಪ್ರಸ್ತುತ ಎಂ.ಜಿ.ಎಂ.ಕಾಲೇಜಿನಲ್ಲಿ ಎಂ.ಎಸ್.ಸಿ.ಪದವಿಯನ್ನು ಓದುತ್ತಿರುವ ಇವರು ಹಿರಿಯಡಕದಲ್ಲಿ ಆಸಕ್ತಿಯುಳ್ಳ ಹಲವಾರು ಮಕ್ಕಳಿಗೆ ಭರತನಾಟ್ಯ ತರಬೇತಿಯನ್ನೂ ನೀಡುತ್ತಿದ್ದಾರೆ.

~ ಸುಹಾನ್, ಉಡುಪಿ


Share